ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು) ಇದರ ೪೧ನೇ ವಾರ್ಷಿಕ ಮಹಾಸಭೆಯು ದಿನಾಂಕ ೨೩-೦೭-೨೦೧೭ ರಂದು ಹಂಚು ಕಾರ್ಮಿಕರ ಭವನದಲ್ಲಿ ನಡೆಸಲಾಯಿತು.
ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೆ. ಲಕ್ಷ್ಮಣ ಬರೆಕಟ್ಟುರವರು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿಐಟಿಯುನ ರಾಜ್ಯ ಸಮಿತಿ ಅಧ್ಯಕ್ಷರಾದ ಕಾಮ್ರೆಡ್ ಎಸ್. ವರಲಕ್ಷ್ಮೀಯವರು “ಕೇಂದ್ರ ಸರಕಾರವು ತಂದಿರುವ ರಸ್ತೆ ಸುರಕ್ಷತಾ ಮಸೂದೆಯಲ್ಲಿ ಸುರಕ್ಷತೆಗಿಂತ ಚಾಲಕರನ್ನು ಶಿಕ್ಷಿಸುವ ಕಾಯಿದೆಗಳು ಅಡಕವಾಗಿವೆಯೆಂದು, ಸ್ವಂತ ಹಣದಿಂದ ಆಟೋ ತೆಗೆದುಕೊಂಡು ಸ್ವಂತ ಉದ್ಯೋಗ ಮಾಡುವ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಆಟೋ ಚಾಲಕರಿಗೆ ಸರಕಾರದಿಂದ ಯಾವುದೇ ಸೌಲಭ್ಯವನ್ನು ನೀಡದೆ ಇಂದು ಬೇರೆ ಬೇರೆ ತೆರಿಗೆಗಳನ್ನು ವಿಧಿಸಿ ಅವರ ಬದುಕಿನಲ್ಲಿ ಅತಂತ್ರ ಪರಿಸ್ಥಿತಿಯನ್ನು ತಂದಿಟ್ಟಿದೆ. ಇವತ್ತು ೪೦ ವರ್ಷ ಮೇಲ್ಪಟ್ಟ ಚಾಲಕರು ಅಧಿಕ ಸಂಖ್ಯೆಯಲ್ಲಿದ್ದು ಅಂತವರಿಗೆ ಬ್ಯಾಡ್ಜ್ ನೀಡಲು ಸರಕಾರವು ೧೦ನೇ ತರಗತಿ ತೇರ್ಗಡೆ ಹೊಂದಿರುವ ಪ್ರಮಾಣಪತ್ರ ಕೇಳುತ್ತಿರುವುದು ಸರಿಯಾದ ಕ್ರಮವಲ್ಲ. ಅಂತಹ ಚಾಲಕರು ಈ ಸಮಯದಲ್ಲಿ ಪರೀಕ್ಷೆ ಬರೆದು ಪ್ರಮಾಣಪತ್ರ ಪಡೆಯುವುದು ಕಷ್ಟಸಾಧ್ಯ. ಇಂತಹ ಕಾನೂನನ್ನು ಹಿಂಪಡೆಯಬೇಕು ಮತ್ತು ಕಟ್ಟಡ ಕಾರ್ಮಿಕರಿಗೆ ಸಿಗುವಂತಹ ಸೌಲಭ್ಯಗಳು ರಾತ್ರಿ ಹಗಲೆನ್ನದೆ ದುಡಿಯುವ ಆಟೋಚಾಲಕರಿಗೆ ಸಿಗಬೇಕು. ಇಂದಿನ ಕಾಲದಲ್ಲಿ ಒಬ್ಬ ಆಟೋಚಾಲಕ ತಾನು ದುಡಿದು ಬಂದ ಹಣದಲ್ಲಿ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ, ಮನೆ ಅಡುಗೆ ಸಾಮಾಗ್ರಿಗಳನ್ನು ತಂದುಕೊಂಡು ಜೀವನ ನಡೆಸುವುದು ಕಷ್ಟಕರವಾಗಿದೆ. ಸರಕಾರವು ಆಟೋಚಾಲಕರಿಗೆ ಪಿ.ಎಫ್., ಇ.ಎಸ್.ಐ. ಮುಂತಾದ ಸೌಲಭ್ಗಳನ್ನು ನೀಡಬೇಕು” ಎಂದು ನುಡಿದರು.
ಸಭೆಯಲ್ಲಿ ಸಿಐಟಿಯುನ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಶಂಕರ, ಕುಂದಾಪುರ ತಾಲೂಕು ಸಮಿತಿಯ ಅಧ್ಯಕ್ಷರಾದ ಎಚ್. ನರಸಿಂಹ, ಸಂಘದ ಗೌರವಾಧ್ಯಕ್ಷರಾದ ಎಚ್. ಕರುಣಾಕರ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಂಘದ ವಾರ್ಷಿಕ ಚಟುವಟಿಕೆಯ ವರದಿಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ಮಂಡಿಸಿದರು. ಕೋಶಾಧಿಕಾರಿ ಸಂತೋಷ ಕಲ್ಲಾಗರ ಲೆಕ್ಕಪತ್ರವನ್ನು ನೀಡಿದರು.
ನಂತರ ನಡೆದ ನೂತನ ಪದಾಧಿಕಾರಿಗಳ ಆಯ್ಕೆಯಲ್ಲಿ ಅಧ್ಯಕ್ಷರಾಗಿ ಕೆ. ಲಕ್ಷ್ಮಣ ಬರೆಕಟ್ಟು, ಗೌರವಾಧ್ಯಕ್ಷರಾಗಿ ಎಚ್. ಕರುಣಾಕರ, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ, ಸಂಘಟನಾ ಕಾರ್ಯದರ್ಶಿಯಾಗಿ ರಾಜು ದೇವಾಡಿಗ, ಕೋಶಾಧಿಕಾರಿಯಾಗಿ ಸಂತೋಷ ಕಲ್ಲಾಗಾರ, ಸಂಘದ ಸಲಹೆಗಾರರಾಗಿ ವಿ. ಚಂದ್ರರವರು ಆಯ್ಕೆಗೊಂಡರು. ರಾಜು ದೇವಾಡಿಗರವರು ಸ್ವಾಗತಿಸಿ, ರವಿ ವಿ. ಎಮ್. ಧನ್ಯವಾದ ಸಮರ್ಪಿಸಿದರು.