Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ರತ್ತೂಬಾಯಿ ಜನತಾ ಪ್ರೌಢಶಾಲೆಯಲ್ಲಿ ಇಂಟರ‍್ಯಾಕ್ಟ್ ಕ್ಲಬ್ ಪದಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಸಮಾಜದ ಋಣವನ್ನು ಸಂಪೂರ್ಣವಾಗಿ ತೀರಿಸಲು ಸಾಧ್ಯವಿಲ್ಲ ಆದರೆ ಅವಕಾಶ ಸಿಕ್ಕಾಗಲೆಲ್ಲಾ ಪ್ರಾಮಾಣಿಕವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಧ್ಯವಾದಷ್ಟು ಸಮಾಜಮುಖಿ ಕಾರ್ಯವನ್ನು ಮಾಡಲು ಸಾಧ್ಯವಿದೆ ಎಂದು ವಿಜಯಾ ಬ್ಯಾಂಕ್ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಹೆಚ್. ವಸಂತ ಹೆಗ್ಡೆ ಹೇಳಿದರು.

ಅವರು ಇಲ್ಲಿನ ರತ್ತೂಬಾಯಿ ಜನತಾ ಪ್ರೌಢಶಾಲೆಯಲ್ಲಿ ಬೈಂದೂರು ರೋಟರಿ ಕ್ಲಬ್ ಪ್ರಾಯೋಜಕತ್ವದಲ್ಲಿ ಜರುಗಿದ ಇಂಟರ‍್ಯಾಕ್ಟ್ ಕ್ಲಬ್ ಪದಪ್ರದಾನ ಸಮಾರಂಭದಲ್ಲಿ ನೂತನ ಅಧ್ಯಕ್ಷರಿಗೆ ಅಭಿನಂದಿಸಿ ಮಾತನಾಡಿದರು. ಬದುಕಿನಲ್ಲಿ ಪ್ರಾಮಾಣಿಕತೆ, ವಿಧೇಯತೆ, ಸತ್ಯ ಹಾಗೂ ಸ್ಪಚ್ಚತೆಯನ್ನು ಅಳವಡಿಸಿಕೊಳ್ಳಬೇಕು. ವಿದ್ಯಾವಂತರಾಗುವುದರ ಜೊತೆಗೆ ಪ್ರಜ್ಞಾವಂತರಾಗುವುದು ಕೂಡ ಬಹುಮುಖ್ಯ. ಶಿಸ್ತು ಹಾಗೂ ಸಂಪ್ರದಾಯದೊಂದಿಗೆ ಸುಂದರ ಬದುಕು ರೂಪಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳದ್ದಾಗಿದೆ ಎಂದರು.

ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಹೆಚ್. ಕೃಷ್ಣಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿ ನೂತನ ಇಂಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷೆಗೆ ಪದಪ್ರದಾನ ನೆರವೇರಿಸಿ ಮಾತನಾಡಿ ಪಠ್ಯದ ಕಲಿಕೆಯ ಜೊತೆಗೆ ಬದುಕಿನ ಪಾಠವನ್ನು ಕಲಿಸುವುದೂ ಅಗತ್ಯವಾಗಿದೆ. ರೋಟರಿ ಕ್ಲಬ್, ಇಂಟರ‍್ಯಾಕ್ಟ್ ಕ್ಲಬ್‌ನಂತ ಸಂಸ್ಥೆಗಳ ಮೂಲಕ ಸ್ನೇಹ ಹಾಗೂ ಸೇವೆಯ ಮಹತ್ವವನ್ನು ಅರಿತು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಸದಾವಕಾಶವಿದೆ ಎಂದರು.

ರೋಟರಿ ಸದಸ್ಯರುಗಳಾದ ಮಂಜುನಾಥ ಮಹಾಲೆ, ಕೆ. ವೆಂಕಟೇಶ ಕಾರಂತ್, ಐ. ನಾರಾಯಣ, ಗೋಪಾಲ ಶೆಟ್ಟಿ ಇಂಟರ‍್ಯಾಕ್ಟ್ ಅಧ್ಯಕ್ಷೆ ವೀಣಾ ಬಿ., ಕಾರ್ಯದರ್ಶೀ ವಿಘ್ನೇಶ್ ಉಪಸ್ಥಿತರಿದ್ದರು. ರತ್ತೂಬಾಯಿ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಮಂಜು ಕಾಳವಾರ ಸ್ವಾಗತಿಸಿದರು. ಬೈಂದೂರು ರೋಟರಿ ಕ್ಲಬ್ ಕಾರ್ಯದರ್ಶಿ ಡಾ. ಪ್ರವೀಣ ಶೆಟ್ಟಿ ವಂದಿಸಿದರು. ಶಿಕ್ಷಕ ಹಾಗೂ ಶಾಲೆಯ ಇಂಟರ‍್ಯಾಕ್ಟ್ ಕ್ಲಬ್ ಸಮನ್ವಯಕಾರ ಆನಂದ ಮದ್ದೋಡಿ ಕಾರ್ಯಕ್ರಮ ನಿರೂಪಿಸಿದರು.

Exit mobile version