Kundapra.com ಕುಂದಾಪ್ರ ಡಾಟ್ ಕಾಂ

ಭಟ್ಕಳ: ಫ್ಯಾನ್ ತುಂಡಾಗಿ ದಡಕ್ಕೆ ಅಪ್ಪಳಿಸಿದ್ದ ಮರವಂತೆಯ ಯಕ್ಷೇಶ್ವರಿ ದೋಣಿ. ಮೀನುಗಾರರು ಪಾರು

ಸಾಂದರ್ಭಿಕ ಚಿತ್ರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಭಟ್ಕಳ: ಫ್ಯಾನ್ ತುಂಡಾದ ಪರಿಣಾಮ, ಮುಂದಕ್ಕೆ ಚಲಿಸಲಾಗದ ದೋಣಿ ಸಮುದ್ರದಲ್ಲೇ ಮುಳುಗುತ್ತ ತೇಲುತ್ತ ಬಂದು ರಾತ್ರಿ ನೆಸ್ತಾರ್ ಸಮುದ್ರ ತೀರದ ಮರಳಿನಲ್ಲಿ ಸಿಲುಕಿ ಹಾಕಿಕೊಂಡಿದ್ದ ಮೀನುಗಾರಿಕಾ ದೋಣಿಯೊಂದನ್ನು ಕ್ರೇನ್ ಸಹಾಯದಿಂದ ಮೇಲೆತ್ತಲಾಗಿದ್ದು, ದೋಣಿಯಲ್ಲಿದ್ದ ೩೦ಕ್ಕೂ ಹೆಚ್ಚು ಮೀನುಗಾರರು ಸುರಕ್ಷಿತವಾಗಿ ದಡ ಸೇರಿದ್ದಾರೆ.

ಕುಂದಾಪುರದ ಮರವಂತೆಯ ರಾಮ ಖಾರ್ವಿ ಹಾಗೂ ಪ್ರಭಾಕರ ಖಾರ್ವಿ ಅವರಿಗೆ ಸೇರಿದ ‘ಯಕ್ಷೇಶ್ವರಿ’ ಹೆಸರಿನ ಈ ‘ದೋಣಿಯು ಭಟ್ಕಳದ ಬಂದರಿನಿಂದ ಶುಕ್ರವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿತ್ತು. ತೀರದಿಂದ ಸುಮಾರು ಒಂದೂವರೆ ಕಿ. ಮೀ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ದೋಣಿಯ ಫ್ಯಾನ್ ಇದ್ದಕ್ಕಿದ್ದಂತೆ ತುಂಡಾಗಿದೆ. ಚಲಿಸಲಾಗದ ದೋಣಿ ನಿಧಾನವಾಗಿ ಮುಳುಗಲು ಆರಂಭಿಸಿದೆ. ಮೀನುಗಾರಿಕೆ ನಡೆಸುತ್ತಿದ್ದ ಇತರ ದೋಣಿಗಳ ಮೂಲಕ ಹಗ್ಗವನ್ನು ಬಳಸಿ ಮುಳುಗುತ್ತಿದ್ದ ದೋಣಿಯನ್ನು ಎಳೆಯಲು ಮೀನುಗಾರರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಇದೇ ಸಂದರ್ಭದಲ್ಲಿ ಜೋರಾಗಿ ಗಾಳಿ, ಮಳೆ ಬಂದಿದ್ದರಿಂದ ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಾಗಿ ಮುಳುಗುತ್ತ ತೇಲುತ್ತಾ ಬಂದು ಇಲ್ಲಿನ ತೀರಕ್ಕೆ ಬಂದು ಬಿದ್ದಿದೆ. ದೋಣಿಯ ತಳಭಾಗ ಸಂಪೂರ್ಣ ಒಡೆದು ಹೋಗಿದ್ದರಿಂದ ಸಮುದ್ರದ ನೀರು ಮತ್ತು ಉಸುಕು ತುಂಬಿಕೊಂಡು ದಡದಲ್ಲೇ ಸಿಲುಕಿಕೊಂಡಿತ್ತು. ಕರಾವಳಿ ಕಾವಲು ಪಡೆ ಸಿಬ್ಬಂದಿ ನೆರವಿನೊಂದಿಗೆ ಕ್ರೇನ್ ಮೂಲಕ ದೋಣಿಯನ್ನು ಮೇಲಕ್ಕೆ ಎತ್ತಿ ದಡಕ್ಕೆ ತರಲಾಗಿದೆ. ಅಂದಾಜು 1.5 ಕೋಟಿ ನಷ್ಟವಾಗಿದೆ’ ಎಂದು ಬೋಟ್ ಮಾಲೀಕ ರಾಮ ಖಾರ್ವಿ ತಿಳಿಸಿದರು.

 

Exit mobile version