ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸರಕಾರ ಅಭಿವೃದ್ಧಿಯೇ ಆಡಳಿತ ಮಂತ್ರ ಎನ್ನುವ ನಿಟ್ಟಿನಲ್ಲಿ ಮನಸ್ವಿನಿ, ಮೈತ್ರಿ, ಸಕಾಲ, ಅನ್ನಭಾಗ್ಯ, ಕೌಶಲ್ಯ ಕರ್ನಾಟಕ, ಕ್ಷೀರ ಭಾಗ್ಯ ಹೀಗೆ ಹಲವಾರು ಯೋಜನೆಗಳ ರೂಪಿಸಿ ಯಶಸ್ವಿಯಾಗಿ ಜಾರಿಗೊಳಿಸಿದೆ. ಜಿಲ್ಲೆಯ ಗ್ರಾಮ ಪಂಚಾಯತ್ ವ್ಯಾಪ್ತಿ ಶೌಚಾಲಯ ನಿರ್ಮಾಣ ಗುರಿ ಪೂರೈಸಿದ್ದು, ಸಂಪೂರ್ಣ ಸ್ವಚ್ಛತೆ ಸಾಧಿಸಿ, ದೇಶದಲ್ಲೇ ಉಡುಪಿ ಜಿಲ್ಲೆ ಸ್ವಚ್ಛತೆಯಲ್ಲಿ ಏಳನೇ ಸ್ಥಾನ ಪಡೆದಿದದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಸಿ.ಟಿ. ಹೇಳಿದರು.
ಕುಂದಾಪುರ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ದಿನಾಚರಣೆ ಸಮಿತಿ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಸ್ವಾತಂತ್ರಯೋತ್ಸವ ದ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ಸ್ವಚ್ಛ ಭಾರತ್ ಮಿಶನ್ ಯೋಜನೆಯಲ್ಲಿ ಕುಂದಾಪುರ ಪುರಸಭೆ ಬಯಲು ಶೌಚಾಲಯ ಮುಕ್ತ ಎಂದು ಘೋಷಣೆಯಾಗಿದ್ದು, ಹೆಮ್ಮಯ ಸಂಗತಿ ಎಂದ ಅವರು, ಜಿಲ್ಲೆಗೆ ಕ್ರೀಡಾ ಆಕಾಡೆಮಿ ಸ್ಥಾಪನೆಗೆ ಸರ್ಕಾರಸಮ್ಮತಿಸಿದ್ದು, ಜಿಲ್ಲಾ ವಸತಿ ಕ್ರೀಡಾ ಶಾಲೆಯಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಗ್ರಾಮೀಣ ಭಾಗದ ೧೦೩ ಕಿ.ಮೀ ಉದ್ದದ ರಸ್ತೆಗಳ ಅಭಿವೃದ್ಧಿಗೆ ಕಾಯಕಲ್ಪ ಮಾಡಲಾಗಿದೆ. ಪಿಯುಸಿ ಹಾಗೂ ಎಸ್‌ಎಲ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಒಂದು ವರ್ಷದ ಒಳಗೆ.ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿಸುವ ಸ್ವಚ್ಚ ಮಿಷಿನ್ ಯೋಜನೆ ಚಾಲನೆ ನೀಡಲಾಗುತ್ತಿದೆ ಎಂಬ ಮಾಹಿತಿ ನೀಡಿದರು.
ಕುಂದಾಪುರ ತಾಲೂಕ್ ಪಂಚಾಯತ್ ಅಧ್ಯಕ್ಷೆ ಜಯಾಶ್ರೀ ಸುಧಾಕರ ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ, ಉಪಾಧ್ಯಕ್ಷ ರಾಜೇಶ್ ಕಾವೇರಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಕಾಸ್ ಹೆಗ್ಡೆ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿಸಿಲಿ ಚಂದ್ರ ಕೋಟ್ಯಾನ್, ಕುಂದಾಪುರ ಡಿಎಸ್ಪಿ ಪ್ರವೀಣ್ ಹೆಚ್.ನಾಯ್ಕ್, ವೃತ್ತ ನಿರೀಕ್ಷಕ ಮಂಜಪ್ಪ ಡಿ.ಬಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕೃಷ್ಣ ಶೆಟ್ಟಿ, ತಾಪಂ ಪ್ರಭಾರ ಇಒ ನಾಗಭೂಷಣ ಉಡುಪ,ಯುವಜನ ಸೇವಾ ಅಧಿಕಾರಿ ಕುಸುಮಾಕರ ಶೆಟ್ಟಿ, ಮಾಜಿ ಪುರಸಭಾ ಅಧ್ಯಕ್ಷರಾದ ಪಿ.ಗುಣರತ್ನ, ದೇವಕಿ ಪಿ ಸಣ್ಣಯ್ಯ, ಕಲಾವತಿ ಯು.ಎಸ್., ಪುರಸಭಾ ಸದಸ್ಯರಾದ ಪುಷ್ಪ ಶೇಟ್, ಶಕುಂತಲಾ ಗುಳ್ವಾಡಿ, ವಿಜಯ ಪೂಜಾರಿ, ಶ್ರೀಧರ ಶೇರೆಗಾರ್, ವಿಠಲ್ ಕುಂದರ್, ರವಿರಾಜ್ ಖಾರ್ವಿ ಇದ್ದರು.
ಕುಂದಾಪುರ ತಹಸೀಲ್ದಾರ್ ಜಿ.ಎಂ.ಬೋರ್ಕರ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್ ಬೀಜಾಡಿ ನಿರೂಪಿಸಿದರು.ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ವಂದಿಸಿದರು.
ಲ್ಯಾಪ್ ಟಾಪ್ ವಿತರಣೆ
ಎಸ್ಸೆಸ್‌ಎಎಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಶ್ರೀವತ್ಸಾ ರಾವ್.ಬಿ, ಪ್ರಣೀತ್ ಎಸ್ ಶೆಟ್ಟಿ, ಶಶಾಂಕ್‌ಗೆಲ್ಯಾಪ್‌ಟಾಪ್ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಬಯಲು ಶೌಚಾಲಯ ಮುಕ್ತ ಪುರಸಭೆ ಮಾನ್ಯತೆ ಪಡೆದ ಕುಂದಾಪುರ ಪುರಸಭೆಗೆ ಪ್ರಮಾಣಪತ್ರ ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ್‌ಗೆ ಎಸಿ ಶಿಲ್ಪಾ ನಾಗ್ ಅವರಿಂದ ಸ್ವೀಕರಿಸಿದರು.
ಆಕರ್ಷಕ ಪಥ ಸಂಚಲನ
ಕುಂದಾಪುರ ಡಿಎಸ್ಪಿ ಪ್ರವೀಣ್ ಹೆಚ್.ನಾಯ್ಕ್ ನಿರ್ದೇಶನದಲ್ಲಿ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಬಿ., ಮಾರ್ಗದರ್ಶನದಲ್ಲಿ ಪಿಎಸ್ಸೈ ನಾಸೀರ್ ಹಸೇನ್ ಮುಂದಾಳತ್ವದಲ್ಲಿ ಪೊಲೀಸ್, ಗೃಹ ರಕ್ಷಕ ದಳ, ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಎನ್‌ಸಿಸಿ, ಸ್ಕೌಟ್ ಎಂಡ್ ಗೈಡ್ಸ್, ಸೇವಾದಳದಿಂದ ಆಕರ್ಷಕ ಪಥ ಸಂಚಲನ ನಡೆಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಕಾರ‍್ಯಕ್ರಮ ಜರುಗಿತು.
ಯುವಕರ ಉಮ್ಮೇದು:
ಕುಂದಾಪುರ ಯುವಕರ ತಂಡ ಸ್ವಾತಂತ್ರ್ಯೋತ್ಸವ ವಿಶೇಷ ಆಚರಣೆ ಮೂಲಕ ಗಮನ ಸೆಳೆದರು. ಶಾಸ್ತ್ರಿ ವೃತ್ತದಲ್ಲಿ ಗಾಂಧಿ ಮೈದಾನಕ್ಕೆ ಬರುವ ಎಲ್ಲರಿಗೂ ದ್ವಜದ ಚಿಹ್ನೆಯಾದ ಹ್ಯಾಂಡ್ ಬ್ಯಾಂಡ್ ಹಾಕಿ ಸ್ವಾತಂತ್ರ್ಯೋತ್ಸವ ಶುಭಾಶಯ ಕೋರಿದರು. ಡಿ.ಜೆ ರಂಜು ಮೊದಲಾದವರು ಈ ಕಾರ್ಯಕ್ರಮ ಸಂಘಟಿಸಿದ್ದರು.
ಬೈಂದೂರಿನಲ್ಲಿ ಸಂಭ್ರಮ:
ಬೈಂದೂರಿನ ಶಾಸಕರ ಕಛೇರಿಯಲ್ಲಿ ಜರುಗಿದ ಸ್ವಾತಂತ್ಯೋತ್ಸವದಲ್ಲಿ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಎಸ್ಸೆಸ್‌ಎಎಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಬೈಂದೂರು ವಿಶೇಷ ತಹಶೀಲ್ದಾರರ ಕಛೇರಿ ಸೇರಿದಂತೆ ಎಲ್ಲಾ ಕಛೇರಿ, ಶಾಲಾ ಕಾಲೇಜುಗಳಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.