Kundapra.com ಕುಂದಾಪ್ರ ಡಾಟ್ ಕಾಂ

40 ಸಾವಿರ ಮಂದಿಯಿಂದ ಆಳ್ವಾಸ್‍ನಲ್ಲಿ 71ನೇ ಸ್ವಾತಂತ್ರ್ಯ ಸಂಭ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ : ಸತ್ಯ ಪ್ರಾಮಾಣಿಕತೆಗಳು ಎಂದಿಗೂ ತಮ್ಮ ಬೆಲೆ ಕಳೆದುಕೊಳ್ಳುವುದಿಲ್ಲ. ಅವು ಹೆಚ್ಚು ಮೌಲ್ಯಯುತ ಸಂಗತಿಗಳಾಗಿವೆ. ಎಂದಿಗೂ ಸತ್ಯವೇ ಜಯಿಸುತ್ತದೆ. ವಿದ್ಯಾರ್ಥಿಗಳು ತಮ್ಮ ವೈಯುಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಗರಿಷ್ಠ ಮೌಲ್ಯವೆಂದರೆ ಅದು ಸತ್ಯನಿಷ್ಠೆಯಾಗಿದೆ. ನಮ್ಮ ದೇಶ ನಮಗೆ ಪೂಜನೀಯ, ಮಾತೃ ಸಮಾನ. ಸರ್ವ ಜನಾಂಗಕ್ಕೂ ಇಲ್ಲಿ ಬಾಳ್ವೆಗೆ ಸಮಾನ ಹಕ್ಕುಗಳಿವೆ. ಸಂವಿಧಾನವು ಮೂಲಭೂತವಾಗಿ ನಾಲ್ಕು ಪ್ರಧಾನ ಸ್ಥಂಭಗಳನ್ನು ಹೊಂದಿದ್ದು, ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಮತ್ತು ಪತ್ರಿಕಾರಂಗಗಳು ದೇಶದ ಅಭಿವೃದ್ಧಿಯಲ್ಲಿ ತಮ್ಮದೇ ಪ್ರಾಮುಖ್ಯತೆಯನ್ನು ಹೊಂದಿವೆ. ವಿದ್ಯಾರ್ಥಿಗಳು ದೇಶ ಹಾಗೂ ಸಮಾಜದಿಂದ ಪಡೆದುಕೊಂಡದ್ದನ್ನು ಮತ್ತೆ ಸಮಾಜಕ್ಕಾಗಿ ಧಾರೆಯೆರೆಯಬೇಕು ಹಾಗೂ ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬೇಕು ಎಂದು ನಿಟ್ಟೆ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಎನ್. ವಿನಯ ಹೆಗ್ಡೆ ಹೇಳಿದರು.

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಪುತ್ತಿಗೆ ಪದವಿನಲ್ಲಿರುವ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ 71ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವಿದ್ಯೆಯೆಂಬುದು ಕಠಿಣ ಪರಿಶ್ರಮದಿಂದ ಸಾಧಿಸಬಹುದಾದ ವ್ಯಕ್ತಿಯೊಬ್ಬನ ಜೀವನದ ಬಹುದೊಡ್ಡ ಯಶಸ್ಸು. ಶಿಕ್ಷಿತ ವರ್ಗದಿಂದ ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಸದಭಿರುಚಿಯ ಬೆಳವಣಿಗೆಯನ್ನು ನಿರೀಕ್ಷಿಸಬಹುದು. ವಿದ್ಯಾರ್ಥಿಗಳು ಒಳ್ಳೆಯ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಸಂಗ್ರಾಮದ ಉದ್ದೇಶಗಳನ್ನು ನೈಜ ದಿಶೆಯಲ್ಲಿ ಸಾರ್ಥಕಗೊಳಿಸುತ್ತಾ, ದೇಶ ಭಕ್ತಿಯನ್ನು ನಾವು ಅಳವಡಿಸಿಕೊಳ್ಳುವ ಜೊತೆಗೆ ಮುಂದಿನ ಜನಾಂಗಕ್ಕೆ ಅದರ ಮಹತ್ವವನ್ನು ತಿಳಿಸಿಕೊಡಬೇಕು ಎಂದರು.

ಯುಪಿಎಸ್‍ಸಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದ ನಂದಿನಿ ಕೆ.ಆರ್, ಪಿಯುಸಿ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿ. ಸ್ಪಂದನ, ಸಿಎ-ಸಿಪಿಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ, ದೇಶಕ್ಕೆ ದ್ವಿತೀಯ ಸ್ಥಾನ ಪಡೆದ ತವಿಷಿ ದೇಚಮ್ಮ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಯುಪಿಎಸ್‍ಸಿ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರ್ಯಾಂಕ್ ಪಡೆದ ನಂದಿನಿ ಕೆ.ಆರ್. ಸಂಸ್ಥೆಯ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ದೀರ್ಘ ಕಾಲದ ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಫಲವಾಗಿ ನಾವು ಇಂದು ಸಂಭ್ರಮದಿಂದ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ನಾವು ಎಷ್ಟೇ ಸಾಧನೆಗಳನ್ನು ಮಾಡಿದರೂ ಅದು ಸಮಾಜದಿಂದ ಪಡೆದ ಸಾಲವಾಗಿರುತ್ತದೆ. ಅದನ್ನು ಹಿಂತಿರುಗಿಸುವುದು ನಮ್ಮ ಕರ್ತವ್ಯವೆಂದು ಭಾವಿಸಬೇಕು. ವಿದ್ಯಾರ್ಥಿಗಳು ಸಮಾಜದ ಅಮೂಲ್ಯ ಸ್ವತ್ತುಗಳಾಗುವತ್ತ ಗಮನ ಹರಿಸಬೇಕು ಎಂದ ಅವರು ದೇಶ ವಿಭಜನೆಯ ಸಂದರ್ಭ ಸಮಾಜದಲ್ಲಾಗುತ್ತಿದ್ದ ಬದಲಾವಣೆಯ ಕುರಿತು ರವೀಂದ್ರನಾಥ್ ಠಾಗೋರರು ಕವನದ ಮೂಲಕ ನೀಡಿದ ಪ್ರತಿಕ್ರಿಯನ್ನು ಓದಿ ಹೇಳಿದರು. ದೇಶದ ವಿವಿದೆಡೆಗಳಲ್ಲಿ ಸನ್ಮಾನಗಳನ್ನು ತಾನು ಸ್ವೀಕರಿಸಿದ್ದು, ಆದರೆ ನಾನು ಕಲಿತ ಕಾಲೇಜಿನಲ್ಲಿ ನನಗೆ ನೀಡಲಾದ ಈ ಗೌರವವು ನನ್ನ ಸಂತಸ ತಂದಿದೆ ಎಂದರು.

ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್, ಅಬುದಾಬಿಯ ಎನ್‍ಎಂಸಿ, ಯುಎಇ ಎಕ್ಸ್‍ಚೆಂಜ್ ಸಂಸ್ಥೆಗಳ ಸಿಇಒ ಡಾ.ಬಿ.ಆರ್ ಶೆಟ್ಟಿ, ಮಾಜಿ ಸಚಿವ ಅಮರನಾಥ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ವಿನಯ್ ಆಳ್ವ, ಆಳ್ವಾಸ್ ಸಂಸ್ಥೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಭಾಗವಹಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 26 ಸಾವಿರ ವಿದ್ಯಾರ್ಥಿಗಳು, 5 ಸಾವಿರದಷ್ಟು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಪೋಷಕರು, ಸಾರ್ವಜನಿಕರು ಸೇರಿದಂತೆ 40 ಸಾವಿರ ಮಂದಿ ಪಾಲ್ಗೊಂಡರು.

  

Exit mobile version