Kundapra.com ಕುಂದಾಪ್ರ ಡಾಟ್ ಕಾಂ

ಕೊಡೇರಿಗೆ ಬಾರ್ ಸ್ಥಳಾಂತರ: ಗ್ರಾಮಸ್ಥರ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಿರಿಮಂಜೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗೂರಿನ ಹೆದ್ದಾರಿ ಬದಿಯಲ್ಲಿದ್ದ ಬಾರ್ ಎಂಡ್ ರೆಸ್ಟೋರಂಟನ್ನು ನಾಗೂರು-ಕೊಡೇರಿ ರಸ್ತೆಯ ನಿವೇಶನಕ್ಕೆ ಸ್ಥಳಾಂತರಿಸಿರುವುದನ್ನು ವಿರೋಧಿಸಿ ಗ್ರಾಮದ ಗಂಗೆಬೈಲು, ಕೊಡೇರಿ, ಆದ್ರಗೋಳಿ, ನಾಗೂರು ಪರಿಸರದ ಸ್ಥಳೀಯರು ಬುಧವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಕೊಡೇರಿ ರಸ್ತೆಯ ಹಾಡಿಸ್ಥಳ ಎಂಬಲ್ಲಿ ಸೇರಿ, ಬಾರ್ ವಿರೋಧಿ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತ ನೂರಾರು ಪುರುಷರು ಮತ್ತು ಮಹಿಳೆಯರು ಮೆರವಣಿಗೆಯಲ್ಲಿ ಗ್ರಾಮ ಪಂಚಾಯತ್ ಕಚೇರಿಗೆ ಸಾಗಿದರು. ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿದರು. ಸ್ಥಳಾಂತರಕ್ಕೆ ಗ್ರಾಮ ಪಂಚಾಯತ್ ಅನುಮೋದನೆ ನೀಡಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ಬಳಿಕ ಪಂಚಾಯತ್ ತಕ್ಷಣ ಬಾರ್ ಬಂದ್ ಮಾಡಬೇಕೆಂದು ಆಗ್ರಹಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯ ಜಗದೀಶ ದೇವಾಡಿಗ, ಪ್ರಮುಖರಾದ ಈಶ್ವರ ದೇವಾಡಿಗ, ಕೃಷ್ಣ ಖಾರ್ವಿ, ತಬ್ರೆಜ್, ವಿಜಯ ಪೂಜಾರಿ, ವಿನೋದಾ ಪೂಜಾರಿ ಬಾರ್ ಆರಂಭವಾದ ಸ್ಥಳದ ಸಮೀಪ ಕೇರಿಸ್ಥಳ ದೈವಸ್ಥಾನವಿದೆ. ಬಾರ್‌ಗೆ ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲ. ಇದರಿಂದ ವಾಹನಗಳು ರಸ್ತೆಯ ಮೇಲೆ ನಿಲ್ಲಬೇಕಾಗುತ್ತದೆ. ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ, ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗೆ, ಮಕ್ಕಳಿಗೆ ಕಿರಿಕಿರಿ ಆಗುತ್ತದೆ ಎಂದು ವಾದಿಸಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶೇಖರ ಖಾರ್ವಿ ಮತ್ತು ಅಭಿವೃದ್ಧಿ ಅಧಿಕಾರಿ ನವೀನ್‌ಕುಮಾರ್ ಸಿ. ಎಸ್. ಈ ನಿವೇಶನದಲ್ಲಿ ಬಾರ್ ತೆರೆಯುವುದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳಿಂದ ಸುಮಾರು ೪೦ ದೂರುಗಳು ಬಂದಿವೆ. ಆದುದರಿಂದ ಗ್ರಾಮ ಪಂಚಾಯತ್ ಬಾರ್ ನಡೆಸಲು ಅಥವಾ ಉದ್ದಿಮೆ ನಡೆಸಲು ಅದಕ್ಕೆ ಅನುಮೋದನೆ ನೀಡಿಲ್ಲ. ಆದರೆ ಅಬಕಾರಿ ಜಿಲ್ಲಾಧಿಕಾರಿಗಳು ಬಾರ್ ಮಾಲೀಕರು ಬಾರ್ ತೆರೆದ ಬಳಿಕ ಗ್ರಾಮ ಪಂಚಾಯತ್‌ನಿಂದ ಉದ್ದಿಮೆ ಪರವಾನಿಗೆ ಸಲ್ಲಿಸುವ ಮುಚ್ಚಳಿಕೆ ನೀಡಿದ್ದರಿಂದ ಮತ್ತು ಉಳಿದಂತೆ ಆಕ್ಷೇಪಣೆ ಮುಕ್ತವಾಗಿರುವುದರಿಂದ ಸ್ಥಳಾಂತರಕ್ಕೆ ಅನುಮತಿ ನೀಡಿರುವುದನ್ನು ವಿವರಿಸಿದರು.

ತೀವ್ರ ವಾದ-ವಿವಾದದ ಬಳಿಕ ಅಭಿವೃದ್ಧಿ ಅಧಿಕಾರಿಗಳು ಬಾರ್ ಸ್ಥಳಾಂತರಕ್ಕೆ ಗ್ರಾಮ ಪಂಚಾಯತ್ ಈ ವರೆಗೆ ನಿರಾಕ್ಷೇಪಣಾ ಪತ್ರವನ್ನಾಗಲಿ, ಉದ್ದಿಮೆ ಪರವಾನಿಗೆಯನ್ನಾಗಲೀ ನೀಡಿಲ್ಲ ಎಂಬ ಪತ್ರ ನೀಡಿದರು. ಅದನ್ನು ಪಡೆದ ಪ್ರತಿಭಟನಕಾರರು ಯಾವುದೇ ಕಾರಣಕ್ಕೆ ಇಲ್ಲಿ ಬಾರ್ ನಡೆಸಲು ಅವಕಾಶ ನೀಡುವುದಿಲ್ಲ ಎಂದ ದೃಢ ನಿಲುವು ತಾಳಿ ಆ ಬಗ್ಗೆ ಅಬಕಾರಿ ಜಿಲ್ಲಾ ಅಧಿಕಾರಿಗಳನ್ನು ಭೇಟಿಯಾಗಿ ದೂರು ಸಲ್ಲಿಸಲು ಹಲವು ವಾಹನಗಳಲ್ಲಿ ಉಡುಪಿಗೆ ತೆರಳಿದರು.

 

Exit mobile version