Kundapra.com ಕುಂದಾಪ್ರ ಡಾಟ್ ಕಾಂ

ರಾಷ್ಟ್ರದ ಒಳಿತಿಗಾಗಿ ಯುವಶಕ್ತಿ ಹೆಚ್ಚು ತೊಡಗಿಕೊಳ್ಳಬೇಕಿದೆ: ವಿಜಯ ಕೊಡವೂರು

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಹೆಚ್ಚಿನ ಯುವಶಕ್ತಿ ಭಾರತ ದೇಶದಲ್ಲಿದೆ. ಆದರೆ ಈ ಶಕ್ತಿಯು ದೇಶದ ಭದ್ರತೆಗೆ ವಿನಿಯೋಗಿಸಲು ಸಿಗುತ್ತಿಲ್ಲ. ಯುವಕರು ಭ್ರಮೆಯ ಗುಂಗಿನಲ್ಲಿ ತೇಲಾಡುತ್ತಿದ್ದಾರೆ. ದೇಶದ ಮುಂದೆ ದೊಡ್ಡ ಸವಾಲುಗಳೇ ಇದ್ದು, ಮುಂದಿನ ದಿನಗಳು ಮತ್ತಷ್ಟು ಕಷ್ಟಕರವಾಗಿದೆ. ಹೀಗಾಗಿ ರಾಷ್ಟ್ರದ ಏಳಿಗೆಗೆ ಒಳಿತಿಗಾಗಿ ನಮ್ಮನ್ನು ಅರ್ಪಿಸಿಕೊಳ್ಳಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉಡುಪಿ ಜಿಲ್ಲಾ ಉದ್ಯೋಗಿ ಕಾರ್ಯಪ್ರಮುಖ್ ವಿಜಯ ಕೊಡವೂರು ಹೇಳಿದರು.

ಅವರು ಗಂಗೊಳ್ಳಿಯ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸೌಹಾರ್ದತೆ ಮತ್ತು ಸಹಬಾಳ್ವೆಯ ಪ್ರತಿಯೊಬ್ಬ ಭಾರತೀಯನ ಕಣಕಣದಲ್ಲಿ ಇದೆ. ರಾಷ್ಟ್ರ ಧರ್ಮವನ್ನು ಮೀರಿದ ಮತ್ತೊಬ್ಬ ಧರ್ಮವು ದೇಶದ ಬೆಳವಣಿಗೆಗೆ ಅಡ್ಡಗಾಲು ಹಾಕುತ್ತಿದೆ. ಇದರ ಕರಾಳ ಮುಖಗಳು ದೇಶ ಕಟ್ಟಲು ನಮಗೆ ತೊಂದರೆಯನ್ನುಂಟು ಮಾಡುತ್ತಿದೆ. ಕೇವಲ ಕೇರಳಕ್ಕೆ ಸೀಮಿತವಾಗಿದ್ದ ಜಿಹಾದಿ ಉಗ್ರವಾದ ಇಂದು ಕರಾವಳಿಯ ಮುಕ್ಕಾಲು ಭಾಗವನ್ನು ಆಕ್ರಮಿಸಿದೆ. ಕಾಶ್ಮೀರಕ್ಕೆ ಸೀಮಿತವಾಗಿದ್ದ ಭಯೋತ್ಪಾದನೆ ಇಂದು ಕರಾವಳಿ ಭಾಗವನ್ನು ತಲುಪಿದೆ. ಗೋಹತ್ಯೆ, ಲ್ಯಾಂಡ್ ಜಿಹಾದ್ ಮೊದಲಾದ ಅನೇಕ ಸಮಸ್ಯೆಗಳು ಹಿಂದು ಸಮಾಜವನ್ನು ಬಹಳಷ್ಟು ಕಾಡುತ್ತಿದೆ ಎಂದು ಅವರು ಹೇಳಿದರು.

ಅಖಂಡ ಭಾರತ ನಿರ್ಮಿಸುವ ಮೊದಲು ಉಳಿದ ಭಾರತವನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯಬೇಕು. ಪ್ರಾದೇಶಿಕ ಭಿನ್ನತೆ ಅಖಂಡ ಭಾರತ ನಿರ್ಮಾಣಕ್ಕೆ ತೊಡರಾಗಿದ್ದು, ರಾಜ್ಯಗಳಲ್ಲಿ ಪ್ರತ್ಯೇಕತೆಯ ಕೂಗು ಕೇಳಿ ಬರುತ್ತಿದೆ. ಭಾರತೀಯರಾದ ನಾವೆಲ್ಲರೂ ಆತ್ಮಶೋಧನೆ ಮಾಡಿಕೊಳ್ಳಬೇಕು. ಅಖಂಡ ಭಾರತ ನಿರ್ಮಾಣದ ಹಿಂದಿರುವ ಆಶಯಗಳಿಗೆ ಜೀವ ತುಂಬಬೇಕು. ದುಪ್ಪಟ್ಟು ವೇಗದಲ್ಲಿ ಕೆಲಸ ಮಾಡಿ ದೇಶದ ಒಳಿತಿಗಾಗಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ಗಂಗೊಳ್ಳಿಯ ವಕೀಲ ಗಿರೀಶ ಕುಮಾರ್ ಗಂಗೊಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಡೆದ ಪಂಜಿನ ಮೆರವಣಿಗೆಗೆ ಗಂಗೊಳ್ಳಿಯ ಮಲ್ಯರಬೆಟ್ಟು ಶ್ರೀ ಗ್ರಾಮ ಜಟ್ಟಿಗ ದೇವಸ್ಥಾನದ ಬಳಿ ಗಂಗೊಳ್ಳಿಯ ಮತ್ಸ್ಯೋದ್ಯಮಿ ಎಂ.ಜನಾರ್ದನ ಖಾರ್ವಿ ಚಾಲನೆ ನೀಡಿದರು. ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಘಟಕದ ಸಂಚಾಲಕ ರತ್ನಾಕರ ಗಾಣಿಗ ಉಪಸ್ಥಿತರಿದ್ದರು. ಯಶವಂತ ಖಾರ್ವಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿವೇಕ ಖಾರ್ವಿ ಪ್ರತಿಜ್ಞಾವಿಧಿ ಬೋಧಿಸಿದರು. ನಿತಿನ್ ಖಾರ್ವಿ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಗಂಗೊಳ್ಳಿಯ ಎಲ್ಲೆಡೆ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

 

Exit mobile version