Kundapra.com ಕುಂದಾಪ್ರ ಡಾಟ್ ಕಾಂ

ಮಾಬುಕಳದಿಂದ ಕುಂದಾಪುರ ಪಾದಯಾತ್ರೆ ಸಮಾರೋಪದಲ್ಲಿ ರಾಜ್ಯ ಸರಕಾರದ ವಿರುದ್ಧ ಆಶ್ರೋಶ

ಬಡವರಿಗೆ ಹಕ್ಕುಪತ್ರ, ರೇಷನ್ ಕಾರ್ಡ್ ನೀಡಲು ರಾಜ್ಯ ಸರಕಾರ ವಿಫಲ: ಶ್ರೀನಿವಾಸ ಪೂಜಾರಿ
ಮಲೇಷಿಯಾದ ಮರಳು ತರಿಸಿ ಜನರೊಂದಿಗೆ ಸರಕಾರ ವ್ಯವಹಾರಕ್ಕಿಳಿದಿದೆ: ಜೆಪಿ ಹೆಗ್ಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಕ್ಕುಪತ್ರ ನೀಡುತ್ತೇವೆ ಎಂದು ರಾಜ್ಯ ಸರಕಾರ ಭರವಸೆಯನ್ನಷ್ಟೇ ನೀಡುತ್ತಿದೆ. ಆದರೆ ಆ ಬಗ್ಗೆ ಸಮರ್ಪಕ ನಿಲುವು ತಳೆದಿಲ್ಲ. ಕುಂದಾಪುರ ತಾಲೂಕಿನಲ್ಲಿ ಹನ್ನೆರಡು ಸಾವಿರ ಜನರಿಗೆ ಹಕ್ಕುಪತ್ರ ನೀಡಲು ಬಾಕಿಯಿದ್ದು, ಕೆಲವು ತಿಂಗಳ ಹಿಂದೆ 600 ಜನರಿಗೆ ಮಾತ್ರ ನೀಡಲಾಗಿತ್ತು. ಬಿಜೆಪಿ ಪ್ರತಿಭಟನೆ ಕೈಗೊಂಡ ಬಳಿಕ 1500 ಜನರಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಉಳಿದವರಿಗೆ ಹಕ್ಕುಪತ್ರ ನೀಡದೇ ಸತಾಯಿಸುತ್ತಿರುವುದು ಯಾವ ನ್ಯಾಯ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು.

ಜಿಲ್ಲಾ ಬಿಜೆಪಿ ಹಿಂದೂಳಿದ ಮೋರ್ಚಾದ ನೇತೃತ್ವದಲ್ಲಿ ಕುಂದಾಪುರ ಶಾಸ್ತ್ರಿ ವೃತ್ತದ ಬಳಿ ಹಕ್ಕುಪತ್ರ, ಮರಳುಗಾರಿಕೆ ಹಾಗೂ ಪಡಿತರ ಚೀಟಿ ವಿಚಾರದಲ್ಲಿ ರಾಜ್ಯ ಸರಕಾರ ಬಡವರನ್ನು ವಂಚಿಸುತ್ತಿದೆ ಎಂದು ಆರೋಪಿಸಿ ಮಾಬುಕಳದಿಂದ ಕುಂದಾಪುರದ ತನಕ ಹಮ್ಮಿಕೊಂಡಿದ್ದ ಪಾದಯಾತ್ರೆ ಸಮಾರೋಪ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಮೂವತ್ತನಾಲ್ಕು ಸಾವಿರ ಹೆಕ್ಟೇರ್ ಡೀಮ್ಟ್ ಪಾರೆಸ್ಟ್ ಎಂದು ಹೇಳಲಾಗಿದ್ದ ಭೂಮಿಯನ್ನು ಸರ್ವೇ ಮಾಡಿ ಜಿಲ್ಲಾಧಿಕಾರಿಗಳು ಸರಕಾರಕ್ಕೆ ವರದಿ ನೀಡಿದ್ದಾರೆ. ಡೀಮ್ಡ್ ಫಾರೆಸ್ಟ್ ಅಲ್ಲದ ಜಾಗವನ್ನು ಕೈಬಿಡುವಂತೆ ಹೇಳಲಾಗಿದ್ದರೂ ಸರಕಾರ ಈವರೆಗೂ ಏನೂ ಕ್ರಮ ಕೈಗೊಂಡಿಲ್ಲ. ಈ ಹಿಂದೆ ಬಿಜೆಪಿ ಸರಕಾರ 94ಸಿ ಕಾಯಿದೆ ಜಾರಿಗೆ ತರಲು ಮುಂದಾಗಿದ್ದಾಗ ಕಾಂಗ್ರೆಸ್ ಕೃಪಾಪೋಷಿತ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಿರಾಕರಿಸಿದರು. ಅದನ್ನೇ ಸ್ವಲ್ಪ ತಿದ್ದುಪಡಿ ಮಾಡಿ ಕಾಂಗ್ರೆಸ್ ಸರಕಾರ ತಂದರೆ ರಾಜ್ಯಪಾಲರು ಸಹಿ ಕಾಂಗ್ರೆಸ್ ಪಕ್ಷಕ್ಕೆ ಕ್ರೆಡಿಟ್ ನೀಡಿದ್ದರು. ಆದರೆ ಅಷ್ಟಗಿಯೂ ಬಡವರಿಗೆ ಹಕ್ಕುಪತ್ರ ವಿತರಿಸುವಲ್ಲಿ ಸರಕಾರ ಸೋತಿದೆ ಎಂದ ಅವರು ಬಡವರಿಗೆ ಮೊದಲು ಸರಿಯಾಗಿ ರೇಷನ್ ಕಾರ್ಡ್ ನೋಡಿ. ಬಳಿಕ ವಿಮಾನ ಟಿಕೇಟ್ ನೀಡಬಹುದು ಎಂದು ವ್ಯಂಗ್ಯವಾಡಿದರು.

ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ ಜಿಲ್ಲೆಯ ಮರಳು ಸಮಸ್ಯೆಗೆ ಸರಕಾರವೇ ನೇರ ಹೊಣೆ. ಸಮಸ್ಯೆ ಪರಿಹಾರಕ್ಕೆ ಸಚಿವರು ಚರ್ಚೆ ಮಾಡಿದ್ದೇ ಇಲ್ಲಿನ ಸಚಿವರ ಸಾಧನೆ. ಚುನಾವಣೆ ಹತ್ತರವಾಗುತ್ತಿದ್ದಂತೆ ತೊಂದರೆಯಾಗುತ್ತದೆ ಎಂಬ ಕಾರಣವನ್ನು ಹೇಳಿ ಮರಳುಗಾರಿಕೆಗೆ ಸಮಸ್ಯೆ ಬಗೆಹರಿಸುವ ನಾಟಕವಾಡುತ್ತಿದ್ದಾರೆ. ಸ್ಥಳೀಯ ಲಭ್ಯವಾಗುವ ಮರಳನ್ನು ಬಿಟ್ಟು ದುಬಾರಿ ಬೆಲೆ ಮಲೇಶಿಯಾದ ಮರಳನ್ನು ಆಮದು ಮಾಡಿಕೊಂಡಿರುವ ಸರಕಾರ ಜನರೊಂದಿಗೆ ವ್ಯವಹಾರಕ್ಕಿಳಿದಿದೆ ಎಂದುರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಜಿಪಂ ಸದಸ್ಯ ರಾಘವೇಂದ್ರ ಕಾಂಚನ್, ಉಡುಪಿ ತಾಪಂ ಅಧ್ಯಕ್ಷೆ ನಳಿನಿ, ಕುಂದಾಪುರ ತಾಪಂ ಅಧ್ಯಕ್ಷೆ ಜಯಶ್ರೀ ಸುಧಾಕರ ಮೊಗವೀರ, ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ, ಕಾಪು ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು, ರಾಜ್ಯ ಬಿಜೆಪಿ ಹಿಂದೂಳಿದ ಮೊರ್ಚಾ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ಬಿಜೆಪಿ ಕಾರ‍್ಯಕಾರಿ ಸಮಿತಿ ಸದಸ್ಯ ಬೇಳೂರು ರಾಘವೇಂದ್ರ ಶೆಟ್ಟಿ, ಕುಂದಾಪುರ ಮಹಿಳಾ ಮೋರ್ಚಾ ಅಧ್ಯಕ್ಷೆ ಜಾನಕಿ ಬಿಲ್ಲವ, ಯುವ ಮೋರ್ಚಾ ಅಧ್ಯಕ್ಷ ಸತೀಶ್, ಹಿಂದೂಳಿದ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಕಿರಣ್ ಕುಮಾರ್, ಕೃಷಿ ಮೋರ್ಚಾ ಉಪಾಧ್ಯಕ್ಷೆ ಪ್ರವೀಣ್ ಕುಮಾರ್ ಶೆಟ್ಟಿ, ಮಾಜಿ ಜಿಪಂ ಸದಸ್ಯ ಗಣಪತಿ ಶ್ರೀಯಾನ್, ಎಸ್ಸಿ ಮೋರ್ಚಾ ಅಧ್ಯಕ್ಷ ಗಣೇಶ್ ಕಳಂಜೆ ಇದ್ದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿಶೋರ್ ಕುಮಾರ್ ಬಿ. ಪ್ರಾಸ್ತಾವಿಕ ಮಾತಾನಾಡಿದರು. ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Exit mobile version