Kundapra.com ಕುಂದಾಪ್ರ ಡಾಟ್ ಕಾಂ

ಆಂತರಿಕ ಹಾಗೂ ಬಾಹ್ಯ ದಾಳಿ ಎದುರಿಸಲು ಹಿಂದೂಗಳು ಸಂಘಟಿತರಾಗಬೇಕಿದೆ: ಪ್ರಕಾಶ್ ಪಿ. ಎಸ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹಿಂದೂತ್ವ ಹಾಗೂ ಹಿಂದೂತ್ವವಾದಿಗಳನ್ನು ನಿರಂತರವಾಗಿ ದಮನಿಸುವ ಕಾರ್ಯ ರಾಜಕೀಯ ಶಕ್ತಿ ಹಾಗೂ ಬುದ್ಧಿಜೀವಿಗಳಿಂದಾಗುತ್ತಿದೆ. ಹಿಂದೂ ಸಮಾಜದ ಅಸ್ಮಿತೆಯನ್ನು ಅಲುಗಾಡಿಸುವ ಆಂತರಿಕ ದಾಳಿ ಹಾಗೂ ದೇಶದ ಸುಸ್ಥಿರ ಪ್ರಗತಿಗೆ ತೊಡಕನ್ನುಂಟುಮಾಡುವ ಬಾಹ್ಯ ದಾಳಿಗಳು ಹಲವು ವರ್ಷಗಳಿಂದಲೂ ನಡೆಯುತ್ತಲೇ ಇದೆ. ಈ ಎಲ್ಲಾ ಬಗೆಯ ದಾಳಿಯನ್ನೂ ಸಮರ್ಥವಾಗಿ ಎದುರಿಸಲು ಹಿಂದೂ ಸಂಘಟನೆಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಕರ್ನಾಟಕ ಪ್ರಾಂತದ ಸಹಪ್ರಾಂತ ಸಂಪರ್ಕ ಪ್ರಮುಖ್ ಪ್ರಕಾಶ್ ಪಿ. ಎಸ್ ಹೇಳಿದರು.

ಅವರು ಯಡ್ತರೆ ಜೆಎನ್‌ಆರ್ ಕಲಾಮಂದಿರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ನೇತೃತ್ವದಲ್ಲಿ ಜರುಗಿದ ಬೈಂದೂರು ತಾಲೂಕಿನ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ಧರ್ಮ ಜಾಗರಣೆ, ಸಾಮರಸ್ಯ, ಗ್ರಾಮ ವಿಕಾಸ, ಕುಟುಂಬ ಪ್ರಭೋದನೆಯಂತಹ ಅಂಶಗಳನ್ನು ಪ್ರತಿ ಗ್ರಾಮದಲ್ಲಿಯೂ ಹಿಂದೂಪರ ಕಾರ್ಯಕರ್ತರು ಅಳವಡಿಸಿಕೊಂಡು ಹಿಂದೂ ಧರ್ಮಿಯರನ್ನು ಸಂಘಟಿಸಿವುದಲ್ಲದೇ ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.

ನೆರೆಯ ವೈರಿ ರಾಷ್ಟ್ರ ಚೀನಾ ದೇಶದ ಮೇಲೆ ನೇರವಾಗಿ ಯುದ್ದ ಮಾಡದೇ ಪರೋಕ್ಷವಾಗಿ ದೇಶದ ಆರ್ಥಿಕತೆಯನ್ನು ತಗ್ಗಿಸುವ ಕೆಲಸ ಮಾಡುತ್ತಿದೆ. ಚೀನಾದಿಂದ ತಯಾರಾಗುವ ವಸ್ತುಗಳಿಗೆ ತಗಲುವ ನೈಜ ವೆಚ್ಚಕ್ಕಿಂತ ಕಡಿಮೆಯಲ್ಲಿಯೇ ಭಾರತಕ್ಕೆ ರಪ್ತು ಮಾಡುತ್ತಿದೆ. ಇದರಿಂದಾಗಿ ದೇಶಿಯ ಕಂಪೆನಿಗಳು ಚೀನಾ ನಿಗದಿ ಪಡಿಸುವ ಬೆಲೆಗೆ ಅದೇ ವಸ್ತುವನ್ನು ಉತ್ಪಾದಿಸಲಾಗದೇ ಬಾಗಿಲು ಹಾಕುವಂತಹ ಸ್ಥಿತಿ ಬಂದೊದಗಿದೆ. ಇಂತಹ ವಿದ್ಯಮಾನವನ್ನು ಚೀನಾವು ನಮ್ಮ ದೇಶದ ಆರ್ಥಿಕತೆ ವ್ಯವಸ್ಥೆಯನ್ನು ಕುಗ್ಗಿಸುವಲ್ಲಿ ಮಾಡುವ ಹೂಡಿಕೆ ಎಂದು ಹೇಳುತ್ತಿದೆ. ಇಂತಹ ವ್ಯವಸ್ಥಿತ ಸಂಚಿನಿಂದ ಹೊರಬಂದು ಚೀನಾ ದೇಶದ ಉತ್ಸನ್ನಗಳನ್ನು ಬಹಿಷ್ಕರಿಸುವ ದೃಢ ನಿರ್ಧಾರವನ್ನು ಕೈಗೊಳಬೇಕಿದೆ ಎಂದರು. ಈ ಸಂದರ್ಭ ಉಡುಪಿ ಜಿಲ್ಲಾ ಸಹ ಕಾರ್ಯವಾಹ ಯೋಗೀಶ್ ನಾಯಕ್ ಶಿರಿಯಾರ ಉಪಸ್ಥಿತರಿದ್ದರು. ತಾಲೂಕು ಕಾರ್ಯವಾಹ ಗೋಪಾಲ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.

 

Exit mobile version