Kundapra.com ಕುಂದಾಪ್ರ ಡಾಟ್ ಕಾಂ

ದೇವರ ಭಜನೆ, ನಾಮಸ್ಮರಣೆ ಧಾರ್ಮಿಕತೆ ಹೆಚ್ಚುವುದು: ಚೆನ್ನಬಸವ ಸ್ವಾಮೀಜಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ದೇವಸ್ಥಾನಗಳಲ್ಲಿ ನಿತ್ಯ ನಿರಂತರಾಗಿ ದೇವರ ಪೂಜೆ, ಉಪಾಸನೆಗಳು ನಡೆದುಕೊಂಡು ಬಂದರೆ ದೇವಸ್ಥಾನದಲ್ಲಿ ದೇವರ ಸಾನಿಧ್ಯ ವೃದ್ಧಿಯಾಗುತ್ತದೆ. ದೇವಳಕ್ಕೆ ಆಗಮಿಸುವ ಭಕ್ತರ ಸಕಲ ಇಷ್ಟಾರ್ಥಗಳು ಈಡೇರಿ ದೇವಸ್ಥಾನ ಅಭಿವೃದ್ಧಿಯಾಗುತ್ತದೆ. ಪ್ರತಿಯೊಂದ ಮನೆಗಳಲ್ಲಿ ದೇವರ ಭಜನೆ, ನಾಮಸ್ಮರಣೆ ಮೊದಲಾದ ಧಾರ್ಮಿಕ ಚಟುವಟಿಕೆಗಳು ನಡೆದಾಗ ಜನರಲ್ಲಿ ಧಾರ್ಮಿಕತೆ ಬೆಳೆಯುತ್ತದೆ ಎಂದು ಅಕ್ಕಲಕೋಟ ಸ್ವಾಮಿ ಸಮರ್ಥ ಆಶ್ರಮದ ಮ.ನಿ.ಪ್ರ. ಚೆನ್ನಬಸವ ಸ್ವಾಮೀಜಿ ಹೇಳಿದರು.

ಅವರು ಶ್ರೀಮದ್ ವೀರಶೈವ ಶಿವಯೋಗ ಮಂದಿರ ಸಂಸ್ಥೆ ಹಾಗೂ ವೀರಶೈವ ಮಹಾಸಭೆ ಸಂಸ್ಥಾಪಕ ಶ್ರೀ.ಮೆ. ಪ್ರ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ೧೫೦ನೇ ಜನ್ಮ ಮಹೋತ್ಸವದ ನಿಮಿತ್ತ ಗುಜ್ಜಾಡಿ ನಾಯಕವಾಡಿಯ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಜರಗಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಸಮಾಜದಲ್ಲಿ ಹಿಂದುಗಳಿದ ಪಂಗಡಗಳು ಸಮಾಜದ ಮುಖ್ಯವಾಹಿನಿಗೆ ಬರುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು. ಗೋವುಗಳನ್ನು ರಕ್ಷಣೆ ಮಾಡುವ ಮತ್ತು ಗೋಹತ್ಯೆಯನ್ನು ತಡೆಯುವಲ್ಲಿ ಸಮಾಜದ ಪ್ರತಿಯೊಬ್ಬರು ಕಾರ್ಯತತ್ಪರರಾಗಬೇಕು. ಜೀವನದಲ್ಲಿ ಧಾರ್ಮಿಕ ಮನೋಭಾವ ಬೆಳೆಸಿಕೊಂಡು ಗುರು ಹಿರಿಯರ ಮಾರ್ಗದರ್ಶದಲ್ಲಿ ಮುನ್ನಡೆಯಬೇಕು. ಅಭಿವೃದ್ಧಿಯಲ್ಲಿ ಎದುರಾಗುವ ತೊಡಕುಗಳನ್ನು ನಿವಾರಿಸಿಕೊಂಡು, ನಮ್ಮ ನಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿಕೊಂಡು ಸಮಾಜದ ಅಭಿವೃದ್ಧಿಗಾಗಿ ದುಡಿಯಬೇಕು ಎಂದು ಅವರು ಹೇಳಿದರು.

ಹರಿದ್ವಾರದ ಋಷಿಕುಲ ಆಶ್ರಮದ ಮ.ನಿ.ಪ್ರ. ಮಲ್ಲಿಕಾರ್ಜುನ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ನರಸಿಂಹ ಕೆ. ಮತ್ತು ಪ್ರಧಾನ ಅರ್ಚಕ ಪಾಂಡುರಂಗ ಕೆ. ಉಭಯ ಶ್ರೀಗಳಿಗೆ ಫಲಪುಷ್ಪ ನೀಡಿ ಗೌರವಿಸಿದರು. ದೇವಸ್ಥಾನದ ಕಾರ್ಯದರ್ಶಿ ರಘುವೀರ ಕೆ., ಆಡಳಿತ ಮಂಡಳಿ ಸದಸ್ಯರು, ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲದ ಸದಸ್ಯರು, ಭಕ್ತಾದಿಗಳು ಮತ್ತಿತರರು ಉಪಸ್ಥಿತರಿದ್ದರು.
ದೇವಸ್ಥಾನದ ಗೌರವಾಧ್ಯಕ್ಷ ನಾರಾಯಣ ಕೆ. ಸ್ವಾಗತಿಸಿ ನಿರೂಪಿಸಿದರು.

 

Exit mobile version