Kundapra.com ಕುಂದಾಪ್ರ ಡಾಟ್ ಕಾಂ

ದೇವರಾಜ ಅರಸರ ಆಶಯದಂತೆ ಹಿಂದೂಳಿದ ವರ್ಗಗಳ ಏಳಿಗೆಗೆ ಆದ್ಯತೆ: ಶಾಸಕ ಗೋಪಾಲ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಿಂದುಳಿದ ವರ್ಗಕ್ಕೆ ಸಾಮಾಜಿಕ ನ್ಯಾಯ ನೀಡಿದ ಧೀಮಂತ ನಾಯಕ ಡಿ. ದೇವರಾಜ ಅರಸು ಅವರ ಆಶಯದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ನಡೆಯುತ್ತಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ, ಶೈಕ್ಷಣಿಕ ಪ್ರಗತಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಬಣ್ಣಿಸಿದರು.

ಕುಂದಾಪುರ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ದಿ.ದೇವರಾಜು ಅರಸು ೧೦೨ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಅರಸು ದೊಡ್ಡ ಕುಟುಂಬದಲ್ಲಿ ಹುಟ್ಟಿದರೂ ಕೃಷಿಕರಾಗಿ ಭೂಸುಧಾರಣೆ ಮೂಲಕ ಕ್ರಾಂತಿಕಾರಿ ಬದಲವಾಣೆ, ಜತೆ ಹಾವನೂರು ವರದಿ ಜಾರಿಗೆ ತರುವ ಮೂಲಕ ಹಿಂದುಳಿದವರಿಗೆ ಆತ್ಮಸ್ಥೈರ್ಯ ತುಂಬಿ, ಹಲವಾರು ಹಿಂದುಳಿದ ವರ್ಗದ ನಾಯಕರ ಹುಟ್ಟಿಹಾಕಿದರು ಎಂದು ಹೇಳಿದರು.

ಮೀಸಲಾತಿಗೆ ಹೆಚ್ಚು ಒತ್ತು ನೀಡಿ, ಕೃಷಿಕರು ಮುಖ್ಯವಾಹಿನಿಗೆ ತರುವಲ್ಲಿ ಅರಸು ಪಾತ್ರ ಮಹತ್ವದ್ದು ಎಂದ ಅವರು ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅರಸು, ಹಲವಾರು ಬದಲಾವಣೆ ತಂದರು. ಅವರು ಹಾಕಿಕೊಟ್ಟ ಮಾರ್ಗದರ್ಶಿನಲ್ಲಿ ರಾಜ್ಯ ಸರಕಾರ ನಡೆಯುತ್ತಿದ್ದು, ಹಿಂದುಳಿದವರ ಶೈಕ್ಷಣಿಕ ಪ್ರಗತಿ ಹಿನ್ನೆಲೆಯಲ್ಲಿ ಸರಕಾರ ಲ್ಯಾಪ್‌ಟಾಪ್ ವಿತರಣೆ, ವಸತಿ ಶಾಲೆಗಳ ಮೂಲಕ ಬದಲಾವಣೆ ತರುವ ಪ್ರಯತ್ನಮಾಡುತ್ತಿದೆ ಎಂದು ತಿಳಿಸಿದರು.

ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಶ್ರೀ ಸುಧಾಕರ ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ಕೋಟ ಪಡುಕೆರೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಪ್ರಶಾಂತ ನೀಲಾವರ ಅರಸು ಬದುಕು-ಸಾಧನೆ-ಚಿಂತನ ಬಗ್ಗೆ ಉಪನ್ಯಾಸ ಮಾಡಿದರು.

ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಕಾಶ್ ಹೆಗ್ಡೆ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮತಿ ಅಧ್ಯಕ್ಷ ಜಿ.ಎಂ.ಬೋರ್ಕರ್, ತಾಪಂ ಇಒ ನಾಗಭೂಚಣ ಉಡುಪ, ಕುಂದಾಪುರ ಠಾಣಾ ಪಿಎಸ್ಸೈ ನಾಸಿರ್ ಹಸೇನ್ ಇದ್ದರು.

ಕೋಟೇಶ್ವರ ಶಾಲಾ ವಿದ್ಯಾರ್ಥಿ ಸಂಗೀತ ಮತ್ತು ತಂಡದವರು ಪ್ರಾರ್ಥಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸದಾಶಿವ ಪೂಜಾರಿ ಸ್ವಾಗತಿಸಿದರು. ಬಿಸಿಎಮ್ ಹಾಸ್ಟೆಲ್ ವಾರ್ಡನ್ ಕೃಷ್ಣ ಪೂಜಾರಿ ನಿರೂಪಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಿ.ಎಸ್.ಮಾದರ್ ವಂದಿಸಿದರು.

Exit mobile version