ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಿರಿಮಂಜೇಶ್ವರ ಗ್ರಾಮದ ನಾಗೂರು ಹೆದ್ದಾರಿ ಬದಿಯಿಂದ ನಾಗೂರು- ಕೊಡೇರಿ ರಸ್ತಗೆ ಸ್ಥಳಾಂತರಗೊಂಡು, ಸಾರ್ವಜನಿಕರ ವಿರೋಧದ ಕಾರಣ ತಾತ್ಕಾಲಿಕವಾಗಿ ಮುಚ್ಚಿದ್ದ ಬಾರ್ ಎಂಡ್ ರೆಸ್ಟೊರಂಟ್‌ನ್ನು ಪೊಲೀಸ್ ರಕ್ಷಣೆಯೊಂದಿಗೆ ತೆರೆಯಲಾಯಿತು.
ಪ್ರತಿಭಟನೆಗೆ ಮುಂದಾದ ಜನರಿಗೆ ಉತ್ತರಿಸಿದ ಬಾರ್ ಮಾಲೀಕರು ಅಧಿಕಾರಿಗಳು ಒಂದು ದಿನದ ಮಟ್ಟಿಗೆ ಮುಚ್ಚುವಂತೆ ನೀಡಿದ ಮೌಖಿಕ ಆದೇಶವನ್ನು ಪಾಲಿಸಿದ್ದೇವೆ. ಅಬಕಾರಿ ಇಲಾಖೆ ನೀಡಿದ ಅನುಮತಿಯನ್ವಯ ಮತ್ತು ಮುಚ್ಚುವಂತೆ ಯಾವುದೇ ಲಿಖಿತ ಆದೇಶ ಬಾರದಿರುವುದರಿಂದ ಬಾರನ್ನು ತೆರೆಯಲಾಗಿದೆ ಎಂದರು. ಇದರಿಂದ ಆಕ್ರೋಶಿತರಾದ ಜನರು ಶಾಸಕ ಕೆ. ಗೋಪಾಲ ಪೂಜಾರಿ ಅವರ ಮನೆಗೆ ತೆರಳಿ ಬಾರ್‌ಗೆ ಸ್ಥಳೀಯರ ಆಕ್ಷೇಪಣೆ ಇರುವುದರಿಂದ ಅದನ್ನು ತೆರೆಯಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಿ ಕಾಯಿದೆಯಂತೆ ತೀರ್ಮಾನ ತೆಗೆದುಕೊಳ್ಳಲು ತಿಳಿಸಲಾಗುವುದು ಎಂದು ತಿಳಿಸಿದ ಶಾಸಕರು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ನಾಗೂರಿಗೆ ಭೇಟಿ ನೀಡುವರು ಎಂದು ಪ್ರತಿಭಟನಕಾರರ ಮುಖಂಡರು ತಿಳಿಸಿದ್ದಾರೆ.