Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಅಂಗವಿಕಲರ ಯೋಜನೆಗಳು ಬಿಕ್ಷೆಯಲ್ಲ, ಹಕ್ಕು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಘನತೆಯ ಬದುಕಿಗೆ ಎಲ್ಲಾ ಅಂಗವಿಕಲರಿಗೂ ಶಿಕ್ಷಣ, ಉದ್ಯೋಗ, ಸಿಗಬೇಕು. ಖಾಸಗಿ ಸಂಸ್ಥೆಗಳಲ್ಲೂ ಅಂಗವಿಕಲರಿಗೆ ಶೇಕಡಾ ೫% ಮೀಸಲಾತಿ ನೀಡಬೇಕು. ಅಂಗವಿಕಲರ ಪಾಲಕರ ದೊಂದೆಕುಲ ನಮ್ಮಲ್ಲದೆ ಒಗ್ಗಟ್ಟಿನ ಬಲ ಅಥವಾ ನಮ್ಮಲ್ಲಿರಲಿ ಒಗ್ಗಟ್ಟಿನ ಬಲ, ಸರಕಾರ ಎಲ್ಲಾ ಅಂಗವಿಕಲರಿಗೂ ಉಚಿತ ಮನೆ, ನಿವೇಶನ ಹಾಗೂ ವಿಶೇಷ ಶೌಚಾಲಯ ನೀಡಲಿ, ಅಂಗವಿಕಲರು ಸಮಾಜದ ಅವಿಭಾಜ್ಯ ಅಂಗ, ಬದುಕಲು ಬಿಡಿ. ಅಂಗವಿಕಲರ ಯೋಜನೆಗಳು ಸಮರ್ಪಕವಾಗಿ ಜ್ಯಾರಿಯಾಗಲಿ, ಇದು ಬಿಕ್ಷೆಯಲ್ಲ ಅದು ನಮ್ಮ ಹಕ್ಕು ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ರಾಜ್ಯ ಅಧ್ಯಕ್ಷ ಜಿ.ಎನ್. ನಾಗರಾಜ ಹೇಳಿದರು.

ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ನವದೆಹಲಿಗೆ ಸಂಯೋಜಿಸಲ್ಪಟ್ಟ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಉಡುಪಿ ಜಿಲ್ಲಾ ಸಮ್ಮೇಳನವು ಕುಂದಾಪುರ ಕಾರ್ಮಿಕ ಭವನದಲ್ಲಿ ಜರಗಿದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ವರ್ಷದಿಂದ ಇಲ್ಲಿಯವರೆಗೆ ರಾಜ್ಯ-ಕೇಂದ್ರ ಸರಕಾರಗಳು ಅಂಗವಿಕಲರಿಗಾಗಿ ಯಾವುದೇ ಯೋಜನೆಗಳನ್ನು ರೂಪಿಸದೇ ಇದ್ದುದರಿಂದಾಗಿ ರಾಜ್ಯದ ಅಂಗವಿಕಲರ ಜೀವನದ ಸ್ಥಿತಿಗತಿಗಳಲ್ಲಿ ಯಾವುದೇ ಸುಧಾರಣೆಗಳಾಗದೇ ಹಾಗೆಯೇ ಮುಂದುವರಿದುಕೊಂಡು ಹೋಗಿರುವುದನ್ನು ಕಾಣುತ್ತಿದ್ದೇವೆ. ಸರಕಾರಗಳು ಅಂಗವಿಕಲರಿಗೆ ಸಮಾನ ಅವಕಾಶ, ಪೂರ್ಣ ಭಾಗವಹಿಸುವಿಕೆ, ಹಕ್ಕುಗಳ ಸಂರಕ್ಷಣೆ ಕುರಿತಂತೆ ಮಾತುಗಳಾಯಿತೇ ವಿನಹ ಕೃತಿಯಲ್ಲಂತೂ ಸಾಧ್ಯವಾಗಲೇ ಇಲ್ಲ. ಹೀಗಾಗಿ ರಾಜ್ಯದ ಅಂಗವಿಕಲನ ಬದುಕು ಉತ್ತಮಗೊಳ್ಳುವುದಿರಲಿ ಸುಧಾರಣೆಯಾಗದೇ ಮತ್ತಷ್ಟು ಕಷ್ಟಗಳಿಗೆ ಸಿಲುಕಿದ್ದಾರೆ ಎಂದು ಜಿ.ಎನ್. ನಾಗರಾಜ ಆತಂಕ ವ್ಯಕ್ತ ಪಡಿಸಿದರು.

ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಗೌರವ ಅಧ್ಯಕ್ಷ ವೆಂಕಟೇಶ ಕೋಣಿ ಪ್ರಸ್ತಾವಿಕ ಭಾಷಣ ಮಾಡುತ್ತಾ, ಕೆಲವು ತಂದೆ ತಾಯಿಗಳಿಗೆ ಎಲ್ಲಾ ಮಕ್ಕಳು ತೀವ್ರ ಸ್ವರೂಪದ ಅಂಗವಿಕಲತೆ, ಇಲ್ಲದೆ ಬುದ್ಧಿಮಾಂದ್ಯ, ಆಟಿಸಮ್ ಹೊಂದಿದ ಮಕ್ಕಳು ಇದ್ದಾರೆ. ತಂದೆ ತಾಯಿ ತೀರಿದ ಮೇಲೆ ಅಂಗವಿಕಲ ಮಕ್ಕಳು ಅನಾಥರಾಗುತ್ತಾರೆ. ಇಂತಹ ಸಮಸ್ಯೆ ಇಡೀ ರಾಜ್ಯದಲ್ಲಿ ದೊಡ್ಡದಾಗಿದ್ದು, ಸರಕಾರ ಇದರ ಬಗ್ಗೆ ಪರಿಶೀಲಿಸಬೇಕಾಗಿದೆ. ಕನಿಷ್ಠ ಜಿಲ್ಲೆಗೊಂದರಂತೆ ಬುದ್ಧಿಮಾಂದ್ಯ, ಸ್ವಲೀನ (ಆಟಿಸಂ) ಮತ್ತು ತೀವ್ರ ಅಂಗವಿಕಲತೆ ಇರುವವರಿಗೆ ಸರಕಾರ ಪುನರ್ವಸತಿ ಕೇಂದ್ರ ತೆರೆಯಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ವಾಗಜ್ಯೋತಿ ಕಿವುಡ, ಮತ್ತು ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ, ಮೂಡಬಗೆ, ಅಂಪಾರು, ಮುಖ್ಯೋಪಾಧ್ಯಾಯ ರವೀಂದ್ರರವರು ಮುಖ್ಯ ಅತಿಥಿಗಳಾಗಿ ಸಮ್ಮೇಳನದಲ್ಲಿ ಮಾತನಾಡಿದರು. ಪ್ರತೀ ಗ್ರಾಮ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ನಗರ ಪಟ್ಟಣಗಳಲ್ಲಿ ವಾರ್ಡು ಮಟ್ಟದಲ್ಲಿ ಅಂಗವಿಕಲರ ಹಾಗೂ ಪಾಲಕರ ಸಮಿತಿಗಳನ್ನು ರೂಪಿಸಿ, ಎಲ್ಲಾ ಅಂಗವಿಕಲರ ಘನತೆಯ ಜೀವನಕ್ಕಾಗಿ ಬೃಹತ್ ಅಂಗವಿಕಲರ ಸಂಘಟನೆ ಕಟ್ಟೋಣ ಎಂದು ಹೇಳಿದರು.

ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಕೃಷ್ಣ ಪೂಜಾರಿ ಕೋಟೇಶ್ವರ – ಚಟುವಟಿಕೆಯ ವರದಿ ಮಂಡಿಸಿದರು. ಮುಖಂಡರಾದ ಜಿ.ಎನ್. ಯಶಸ್ವಿ, ಮುಕಾಂಬು ಯಡ್ತರೆ, ವನಿತಾ ಹೊಂಬಾಡಿ ಮಂಡಾಡಿ, ರಾಜು ಪೂಜಾರಿ ಮುದೂರು, ವಿಲ್ಸನ್ ಹಂಗಳೂರು, ವಿಜಯ ಕಿರಿಮಂಜೇಶ್ವರ, ರಾಧಕೃಷ್ಣ ಬೈಂದೂರು, ಅನಿತಾ ಪಡುವರಿ, ಬಾಬು ಕೆ. ದೇವಾಡಿಗ ಉಪ್ಪುಂದ, ನಾಗರಾಜ ತಲ್ಲೂರು, ವಿಜಯಶ್ರೀ ಕಂಬದಕೋಣೆ, ಕೃಷ್ಣ ನಾಯ್ಕ, ಬ್ರಹ್ಮಾವರ ಅಣ್ಣಯ್ಯ ಕೋಡಿ, ದಿನೇಶ ಶೇರುಗಾರ ಕಂಡ್ಲೂರು ಉಪಸ್ಥಿತರಿದ್ದರು. ಮಂಜುನಾಥ ಹೆಬ್ಬಾರ್ ಕಾಲ್ತೋಡು ಸಮ್ಮೇಳನದ ಅಧ್ಯಕ್ಷತೆ ವಹಿಸಿದರು.

Exit mobile version