Kundapra.com ಕುಂದಾಪ್ರ ಡಾಟ್ ಕಾಂ

ಸಹಕಾರಿ ತತ್ವದ ಹೊಸ ದೃಷ್ಟಿಯ ಪತ್ರಿಕೆ ತರಲು ನಂಬಿಯಾರ್ ಕರೆ

ಪತ್ರಿಕಾ ದಿನಾಚರಣೆಯ ಮನ್ನಾ ದಿನ ಡಾ| ಕೆ. ಎಂ. ರಾಘವ ನಂಬಿಯಾರ್ ಅವರಿಗೆ ಪತ್ರಿಕಾ ದಿನದ ಗೌರವ ಸಮರ್ಪಣೆ

ಉಡುಪಿ: ಪತ್ರಕರ್ತರು ಸಹಕಾರಿ ಸಂಘಗಳನ್ನು ತೆರೆದು ಪತ್ರಿಕಾ ಕಂಪೆನಿಗಳನ್ನು ಸ್ಥಾಪಿಸಿ ನ್ಯಾಯನಿಷ್ಠ ಪತ್ರಕರ್ತರನ್ನು ಸೇರಿಸಿಕೊಂಡು ಸಮಾನತೆಯ ತಳಹದಿಯಲ್ಲಿ ಸಮಾಜದ ಆಶೋತ್ತರಗಳನ್ನು ಬಿಂಬಿಸುವ ಸಾಧನವಾಗಿ ಹೊಸ ದೃಷ್ಟಿಯ ಪತ್ರಿಕೆಗಳನ್ನು ತರಲು ಶ್ರಮಿಸಬೇಕು ಎಂದು ಹಿರಿಯ ಪತ್ರಕರ್ತ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಡಾ. ಕೆ. ಎಂ. ರಾಘವ ನಂಬಿಯಾರ್ ಹೇಳಿದರು.

ಅವರು ಪತ್ರಕರ್ತರ ವೇದಿಕೆ (ರಿ). ಬೆಂಗಳೂರು, ಉಡುಪಿ ಜಿಲ್ಲಾ ಘಟಕ, ಕುಂದಾಪ್ರ ಡಾಟ್ ಕಾಂ ಸಹಯೋಗದೊಂದಿಗೆ ಆಯೋಜಿಸಿದ ಹಿರಿಯರೆಡೆಗೆ ನಮ್ಮ ನಡಿಗೆಯ ಏಳನೇ ಕಾರ್ಯಕ್ರಮದಲ್ಲಿ ಪತ್ರಿಕಾ ದಿನದ ಗೌರವ ಸ್ವೀಕರಿಸಿ ಮಾತನಾಡುತ್ತಿದ್ದರು.

ಹಿರಿಯ ಪತ್ರಕರ್ತ ನಾದವೈಭವಂ ವಾಸುದೇವ ಭಟ್ ಮಾತನಾಡಿ ಲೋಕ ಉಪಕಾರ ಅರಿಯದು ಎಂಬುದು ಸಹಜ, ಅದೆಷ್ಟೋ ಜನರ ಬದುಕನ್ನು ಹಸನಾಗಿಸಿದ ಪತ್ರಕರ್ತರ ಸೇವೆಯನ್ನು ಸಮಾಜ ಸ್ಮರಿಸುವುದು ಕಡಿಮೆ, ರಾಘವ ನಂಬಿಯಾರ್ ಅವರನ್ನು ಗುರುತಿಸುವ ಮೂಲಕ ಒಳ್ಳೆಯ ಕೆಲಸ ನಡೆದಿದೆ ಎಂದರು. ಅವರು ಡಾ. ನಂಬಿಯಾರ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ, ಲೇಖನ ಪರಿಕರಗಳನ್ನು ನೀಡಿ ಗೌರವಿಸಿದರು. 

ಪತ್ರಕರ್ತರ ಸಂಘಟನೆಗಳು ನಮ್ಮಲ್ಲಿ ಬಹಳ ಸಂಖ್ಯೆಯಲ್ಲಿವೆ. ಒಂದಾಗುವ ಪರಸ್ಪರ ವಿಚಾರ ವಿನಿಮಯ ಮಾಡುವ ಮುಕ್ತ ವಾತಾವರಣ ಮತ್ತು ಕಾರ್ಯಕ್ರಮಗಳು ಬೇಕಿದೆ ಎಂದು ಪತ್ರಕರ್ತರ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ಹೇಳಿದರು.

ಬಾಲಕೃಷ್ಣ ಕೊಡವೂರು ತಾವು ಚಿತ್ರಿಸಿದ ನಂಬಿಯಾರ್ ಅವರ ರೇಖಾಚಿತ್ರವನ್ನು ಅವರಿಗೆ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ತ್ರಿಷಾ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಾಶ್ ಪಡಿಯಾರ್ ಮರವಂತೆ, ಕುಂದಾಪ್ರ ಡಾಟ್ ಕಾಂ ನ ಸಂಪಾದಕ ಸುನಿಲ್ ಬೈಂದೂರು ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ಕೆ. ಶಿವಶಂಕರ್ ನಂಬಿಯಾರ್ ಅವರನ್ನು ಪರಿಚಯಿಸಿದರು. ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ವಿಶೇಷತೆಗಳು:
* ಹಿರಿಯರೆಡೆಗೆ ನಮ್ಮ ನಡಿಗೆ ವಿಶಿಷ್ಟ ಕಾರ್ಯಕ್ರಮ.
* ಮೊದಲ ಬಾರಿಗೆ ಉಡುಪಿಯ ಪ್ರೆಸ್ ಕಾಲೋನಿಯಲ್ಲಿ ಹಿರಿಯ – ಕಿರಿಯ ಪತ್ರಕರ್ತರ ಸಮ್ಮೀಲನ
* ಡಾ| ರಾಘವ ನಂಬಿಯಾರ್ ಅವರ ಮನೆಯಲ್ಲಿಯೇ ನಡೆದ ಕಾರ್ಯಕ್ರಮ.
* ಗೌರವ ಸ್ವೀಕಾರ ಸಮಾರಂಭದ ಬಳಿಕ ಹಿರಿಯ ಪತ್ರಕರ್ತ ಡಾ| ನಂಬಿಯಾರ್ ಅವರೊಂದಿಗೆ ಸಂವಾದ.
* ಕಾರ್ಯಕ್ರಮಕ್ಕೆ ಆಗಮಿಸಿದ ಪತ್ರಕರ್ತರೆಲ್ಲಾ ಪರಸ್ಪರ ತಮ್ಮ ಪರಿಚಯ ಮಾಡಿಕೊಂಡದ್ದು ವಿಶೇಷವಾಗಿತ್ತು.

ಪೋಟೋ: ಜನಾರ್ಧನ್ ಕೊಡವೂರು

Exit mobile version