ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿಸ್ತುಬದ್ದ ಜೀವನ ಶೈಲಿ. ಸರಳ ಸಜ್ಜನಿಕೆಯ ವ್ಯಕ್ತಿತ್ವ. ಸಾಮಾಜಿಕ ಕಳಕಳಿಯಿಂದ ಹಳ್ಳಿಯ ಜನರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಜನಾನುರಾಗಿ ಹೊಸ್ಕೋಟೆ ಡಾಕ್ಟರ್ ಅವರ ನೂರು ವರ್ಷದ ಬದುಕೇ ಅತಿದೊಡ್ಡ ಸಾಧನೆ ಎಂದು ಕೊಲ್ಲೂರು ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ. ಎಂ. ಸುಕುಮಾರ್ ಶೆಟ್ಟಿ ಹೇಳಿದರು.
ಹೊಸ್ಕೋಟೆ ವಿಜಯಕೃಪಾದ ರಘುವೀರ ಭಂಡಾರ್‌ಕಾರ್ ಸ್ಮರಣ ವೇದಿಕೆಯಲ್ಲಿ ಗುರುವಾರ ಸಂಜೆ ಡಾ. ಸದಾನಂದ ಗಣಪತಿ ರಾವ್ ಹೊಸ್ಕೋಟೆ (ಹೊಸ್ಕೋಟೆ ಡಾಕ್ಟರ್) ಇವರ ಶತ ಸಂವತ್ಸರದ ಸಂಭ್ರಮಾಚರಣೆಯ ಪ್ರಯುಕ್ತ ನಡೆದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಿಸ್ವಾರ್ಥ ಸೇವೆಯಿಂದ ಮಾತ್ರ ತೃಪ್ತಿಯ ಜೀವನ ಪಡೆಯಲು ಸಾಧ್ಯ. ಈ ನೆಲೆಯಲ್ಲಿ ಶ್ರೀಮಂತ ಹಾಗೂ ಸುಸಂಸ್ಕೃತ ರಾವ್‌ಬಹದೂರ್ ವಂಶದಲ್ಲಿ ಜನಿಸಿದರೂ ಹಣದ ವ್ಯಾಮೋಹಕ್ಕೆ ಒಳಗಾಗದೇ ಜನಸೇವೆಯಲ್ಲಿಯೇ ದೇವರನ್ನು ಕಂಡುಕೊಂಡು ಇತಿಹಾಸ ಸೃಷ್ಠಿಸಿದ ಈ ಭಾಗದ ಪ್ರಸಿದ್ದ ವೈದ್ಯರಾಗಿದ್ದಾರೆ. ಲೌಕಿಕ ಆಸೆ ಆಮಿಷಗಳ ದಾಸರಾಗದ ಇವರು ’ವೈದ್ಯೋ ನಾರಾಯಣೋ ಹರಿಃ’ ಎಂಬ ವೇದೋಕ್ತಿಗೆ ಸೂಕ್ತ ವ್ಯಕ್ತಿಯಾಗಿದ್ದಾರೆ ಎಂದರು.
ನಾಗೂರು ಸಂದೀಪನ್ ಆಂಗ್ಲಮಾಧ್ಯಮ ಶಾಲಾ ಅಧ್ಯಕ್ಷ ಕೆ. ಎಸ್. ಪ್ರಕಾಶ್ ರಾವ್ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಹೊಸ್ಕೋಟೆ ಡಾಕ್ಟರಿಗೆ ದಿ. ರಘುವೀರ ಭಂಡಾರ್‌ಕಾರ್ ಕುಟುಂಬದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಾಗರಾಜ ಭಟ್ ಮಕ್ಕಿದೇವಸ್ಥಾನ, ಸಬಿತಾ ಹೊಸ್ಕೋಟೆ, ಡಾ. ಯು. ವಿಶ್ವೇಶ್ವರ ಮಯ್ಯ, ರವೀಂದ್ರ ವೆಂಕಟೇಶ್ ಕಿಣಿ ಕಂಚಿಕಾನ್, ಶ್ರೀನಿವಾಸ್ ಮಾಸ್ಟರ್ ಉಬ್ಜೇರಿ, ಡಾ. ಶಂಕರ್ ರಾವ್ ಹೊಸ್ಕೋಟೆ, ವೆಂಕಟೇಶ್ ರಾವ್ ಹೊಸ್ಕೋಟೆ, ವಿಜಯ ಬಾಯಿ, ದಾಮೋದರ್ ಪ್ರಭು ನಾಯ್ಕನಕಟ್ಟೆ ಶುಭಹಾರೈಸಿದರು. ಎನ್. ರಮೇಶ ಪೈ ಪ್ರಾಸ್ತಾವಿಸಿದರು. ಅಜಿತ್ ಭಂಡಾರ್‌ಕರ್ ಸ್ವಾಗತಿಸಿ, ಎನ್. ಪ್ರಮೋದ್ ಪೈ ವಂದಿಸಿದರು. ಸುಬ್ರಹ್ಮಣ್ಯ ರಾವ್ ನಿರೂಪಿಸಿದರು.