Kundapra.com ಕುಂದಾಪ್ರ ಡಾಟ್ ಕಾಂ

ಕವಿತೆ ಹಲವು ಅರ್ಥಗಳನ್ನು ಧ್ವನಿಸುವಂತಿರಬೇಕು: ಪಾರ್ವತಿ ಜಿ.ಐತಾಳ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಕವಿಯಾದವನು ತನ್ನ ಸುತ್ತುಮುತ್ತ ನಡೆಯುವ ವಿದ್ಯಮಾನಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು ಮತ್ತು ಅವುಗಳಿಗೆ ಸ್ಪಂದಿಸು ಸಂವೇದನೆಯನ್ನು ಸದಾ ಬೆಳೆಸಿಕೊಳ್ಳಬೇಕು. ಎಲ್ಲರಿಗೂ ಗೊತ್ತಿರುವ ಭಾಷೆ ಒಂದೇ, ಪದಗಳು ಒಂದೇ, ಅರ್ಥಗಳು ಒಂದೇ ಆದರೂ ಕವಿಯಾದವನು ಅವನ್ನು ಪೋಣಿಸುವ ರೀತಿ ಭಿನ್ನವಾಗಿರುತ್ತದೆ. ಉಪಮೆ, ರೂಪಕ, ಉತ್ಪ್ರೇಕ್ಷೆ ಮೊದಲಾದ ಅಲಂಕಾರಗಳ ಮೂಲಕ ಮತ್ತು ವಿವಿಧ ರೀತಿಯ ಧ್ವನಿಗಳ ಮೂಲಕ ಕಾವ್ಯ ಭಾಷೆಯು ಸಾಮಾನ್ಯ ಭಾಷೆಗಿಂತ ಹೆಚ್ಚು ಹೇಳಲು ಸಾಧ್ಯವಾಗುತ್ತದೆ. ಕಡಿಮೆ ಶಬ್ದಗಳ ಮೂಲಕ ಹೆಚ್ಚು ವಿಚಾರಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹೇಳಲು ಸಾಧ್ಯವಾಗುವುದೇ ಕವಿತೆಯ ಹೆಚ್ಚುಗಾರಿಕೆ ಎಂದು ಖ್ಯಾತ ಲೇಖಕಿ ಪಾರ್ವತಿ ಜಿ.ಐತಾಳ್ ಹೇಳಿದರು.

ಅವರು ಇಲ್ಲಿನ ವಿಶ್ವ ಕರ್ಮ ಸಭಾಭವನದಲ್ಲಿ ನಡೆದ ಯುವ ಕವಿ ಶ್ರೀರಾಜ ಎಸ್.ಆಚಾರ್ಯ ರಚಿಸಿದ ’ರಿಕ್ತ ನಕ್ಷತ್ರ’ ಎಂಬ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ರಮೇಶ ವಕ್ವಾಡಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ದಾಮೋದರ ಪುರೋಹಿತ್, ರಂಜಿತ್ ಕುಮಾರ್ ಶೆಟ್ಟಿ , ಸ್ವರಾಜ್ಯಲಕ್ಷ್ಮಿ ಮತ್ತು ಶ್ರೀಮತಿ ರತ್ನ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪಾರ್ವತಿ ಜಿ.ಐತಾಳ್ ಅವರು ವಿವಧ ಪ್ರಕಾರಗಳಲ್ಲಿ ಬರೆದ ೫೮ ಕೃತಿಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಿತು.

ಶುಭಶ್ರೀ ಆಚಾರ್ಯ ಅವರ ಪ್ರಾಸ್ತಾವಿಕ ಮಾತುಗಳ ನಂತರ ಮಹಾಲಕ್ಷ್ಮಿ ಮಯ್ಯ ಅವರು ಕೃತಿಯ ಕುರಿತು ತಮ್ಮ ಅನಿಸಿಕೆಗಳನ್ನು ಹೇಳಿದರು. Pವಿ ಶ್ರೀರಾಜ್ ಎಸ್.ಆಚಾರ್ಯ ಅವರು ತಮ್ಮ ಕವನ ಸಂಕಲನದ ಹಿನ್ನೆಲೆಯನ್ನು ವಿವರಿಸಿದರು. ಪೂರ್ಣಶ್ರೀ ಆಚಾರ್ಯ ಧನ್ಯವಾದ ಸಮರ್ಪಿಸಿದರು. ಮಹೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Exit mobile version