ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಪ್ರಶಸ್ತಿಗಾಗಿ ಅರ್ಜಿ ಹಾಕಿ ರಾಜಕೀಯ ಒತ್ತಡ ತಂದು ಪ್ರಶಸ್ತಿ ಪಡೆಯುವ ಇಂದಿನ ದಿನಗಳಲ್ಲಿ ತನ್ನ ಕಾರ್ಯ ಸಾಧನೆಯಿಂದ ಹಾಗೂ ಶಾಲೆಯು ಪ್ರತಿ ವರ್ಷ ದಾಖಲಿಸುತ್ತಿರುವ ಶೈಕ್ಷಣಿಕ ಸಾಧನೆಯಿಂದ ಶಾಲೆಯ ಮುಖ್ಯೋಪಾಧ್ಯಾಯರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವುದು ಪ್ರಶಂಸನೀಯ. ಉತ್ತಮ ಶಿಕ್ಷಕ ಪ್ರಶಸ್ತಿಯು ಶಾಲೆಯ ಇತರ ಶಿಕ್ಷಕರಿಗೆ ಪ್ರೇರಣೆಯಾಗುವಂತಾಗಲಿ ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಮಿತಿ ಉಪಾಧ್ಯಕ್ಷ ಬಿ.ರಾಘವೇಂದ್ರ ಪೈ ಹೇಳಿದರು.
ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಮಿತಿ ವತಿಯಿಂದ ಬುಧವಾರ ಜರಗಿದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
೨೦೧೬-೧೭ನೇ ಸಾಲಿನ ಅನುದಾನ ರಹಿತ ಶಾಲೆಗಳ ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ಶೇರುಗಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಿತಿ ಕಾರ್ಯದರ್ಶಿ ಜಿ.ವಿಠಲ ಶೆಣೈ ಮತ್ತು ಶಾಲೆಯ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಶಾಂತಿ ಡಿಕೋಸ್ತಾ ಶುಭ ಹಾರೈಸಿದರು. ಶಿಕ್ಷಕರ ದಿನಾಚರಣೆ ಅಂಗವಾಗಿ ಶಾಲೆಯ ಎಲ್ಲಾ ಶಿಕ್ಷಕರನ್ನು ಗೌರವಿಸಲಾಯಿತು. ಸಮಿತಿಯ ಸದಸ್ಯರಾದ ರೇಣುಕಾ ವಾಸುದೇವ ಶೇರುಗಾರ್, ಪ್ರಫುಲ್ಲಾ ಶೇರುಗಾರ್, ಮಾಲಿನಿ ಎಂ.ಕಿಣಿ, ದೇವೇಂದ್ರ ಶಿಪಾ, ಶಾಲೆಯ ಸಹಶಿಕ್ಷಕರು ಉಪಸ್ಥಿತರಿದ್ದರು. ಸಮಿತಿ ಸದಸ್ಯ ಜಿ.ರೋಹಿದಾಸ ನಾಯಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.