ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಇಲಾಖೆ ಪ್ರತಿಭಾ ಕಾರಂಜಿಯಂತಹ ವಿನೂತನ ಕಾರ್ಯಕ್ರಮವನ್ನು ಕಳೆದ ಹದಿನೈದು ವರ್ಷಗಳಿಂದ ಸಂಘಟಿಸುತ್ತಿದ್ದು, ಈ ಕರಾವಳಿ ಮಣ್ಣಿನ ಪ್ರತಿಭಾವಂತ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಪಂ ಸದಸ್ಯ ಸುರೇಶ ಬಟ್ವಾಡಿ ಹೇಳಿದರು.
ಉಡುಪಿ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನದ ಆಶ್ರಯದಲ್ಲಿ ಶಿರೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ-ಕಲೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ಸೂಕ್ತ ವೇದಿಕೆ ಸಿಗದೇ ಅವರ ಪ್ರತಿಭೆ ಕಮರಿ ಹೋಗುತ್ತಿತ್ತು, ಆದರೆ ಈಗ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ದೊರಕುತ್ತಿದೆ. ಈ ನೆಲೆಯಲ್ಲಿ ಇದು ಕೇವಲ ಭಾಷಣಕ್ಕೆ ಸೀಮಿತವಾದ ವೇದಿಕೆಯಾಗದೇ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾಗಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳುವಲ್ಲಿ ಪರಿಪೂರ್ಣತೆ ಕಾಣಬೇಕು ಎಂದರು.
ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಮಾತನಾಡಿ ಶಾಲೆಯಲ್ಲಿ ಶಿಕ್ಷಕರು ನೈತಿಕ ಶಿಕ್ಷಣ ನೀಡಿದಾಗ ಮಾತ್ರ ವಿವಿಧ ಮಾಧ್ಯಮಗಳ ಮೂಲಕ ಮಕ್ಕಳು ದಾರಿತಪ್ಪುವುದನ್ನು ತಡೆಯಬಹುದು. ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಪ್ರತಿಯೊಬ್ಬ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಅವರ ಪ್ರತಿಭೆಯನ್ನು ಅನಾವರಣಹೊಳಿಸಲು ಸೂಕ್ತ ವೇದಿಕೆ ನಿರ್ಮಿಸಿ ಕೊಡುವುದು ಶಿಕ್ಷಕರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ ಎಂದರು.
ತಾಪಂ ಅಧ್ಯಕ್ಷೆ ಜಯಶ್ರೀ ಸುಧಾಕರ ಮೊಗವೀರ ಅಧ್ಯಕ್ಷತೆವಹಿಸಿದ್ದರು. ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ತಾಪಂ ಸದಸ್ಯರಾದ ಪುಷ್ಪರಾಜ್ ಶೆಟ್ಟಿ, ದಸ್ತಗೀರ್ ಮೌಲಾನಾ, ವಿಜಯಾ ಬ್ಯಾಂಕ್ ರಿಜನಲ್ ಮ್ಯಾನೇಜರ್ ಚಿದಾನಚಿದ ಹೆಗ್ಡೆ, ಉದ್ಯಮಿ ಎಸ್. ಪ್ರಕಾಶ್ ಪ್ರಭು, ಕರಾಪ್ರಾಶಾ ಶಿಕ್ಷಕ ಸಂಘ ವಲಯಾಧ್ಯಕ್ಷ ವಿಶ್ವನಾಥ ಪೂಜಾರಿ, ಪ್ರೌಢ ಶಾಲಾ ಸಹಶಿಕ್ಷಕ ಸಂಘದ ವಲಯಾಧ್ಯಕ್ಷ ಡಾ. ಕಿಶೋರ್‌ಕುಮಾರ್ ಶೆಟ್ಟಿ, ಎಸ್‌ಡಿಸಿ ಅಧ್ಯಕ್ಷ ಎಸ್. ಎಚ್. ಸತೀಶ್ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ಕೆ. ಹರೀಶ್, ಮುಖ್ಯಶಿಕ್ಷಕ ಶಂಕರ್ ಶಿರೂರು, ಪ್ರತಿಭಾ ಕಾರಂಜಿ ನೋಡೆಲ್ ಅಧಿಕಾರಿ ಕರುಣಾಕರ ಶೆಟ್ಟಿ, ವಲಯದ ವಿವಿಧ ಶಿಕ್ಷಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಶಿಕ್ಷಣ ಸಂಯೋಜಕರು, ಕ್ಷೇತ್ರ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳು, ಮುಖ್ಯಶಿಕ್ಷಕರು ಸಹಶಿಕ್ಷಕರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಒ. ಆರ್. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಅಬ್ದುಲ್ ರವೂಫ್ ಸ್ವಾಗತಿಸಿದರು. ಸುಬ್ರಹ್ಮಣ್ಯ ಜಿ. ಉಪ್ಪುಂದ, ಸಿ. ಎನ್. ಬಿಲ್ಲವ ನಿರೂಪಿಸಿದರು. ರಾಘವೇಂದ್ರ ದಡ್ಡು ವಂದಿಸಿದರು.