Kundapra.com ಕುಂದಾಪ್ರ ಡಾಟ್ ಕಾಂ

ವಿದ್ಯಾರ್ಥಿಗಳು ಪ್ರಜ್ಞಾವಂತರಾಗುವ ಕನಸು ಬಿತ್ತೋಣಾ: ಓಂ ಗಣೇಶ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಲು ಕಾಲೇಜಿನ ಕಟ್ಟಡವೋ ಭೋದಕ ಸಿಬ್ಬಂದಿಯೋ ಮಾತ್ರ ಕಾರಣವಾಗೋದಿಲ್ಲ. ಯಶಸ್ಸಿಗಾಗಿ ಕನಸನ್ನು ಬಿತ್ತುವ ಹೆತ್ತವರೂ ಪ್ರಮುಖ ಕಾರಣರಾಗುತ್ತಾರೆ. ಅಪ್ಪ ಅಮ್ಮ ಬೀರುವ ಪ್ರಭಾವ ಇನ್ನೊಬ್ಬರಿಂದ ಅಸಾಧ್ಯ ಹೀಗಾಗಿ ಮಕ್ಕಳು ಪರೀಕ್ಷಾ ಅಂಕಗಳಿಗಷ್ಟೇ ಸೀಮಿತವಾಗದೆ ಪ್ರಜ್ಞಾವಂತ ನಾಗರಿಕರಾಗಿ ಬದುಕಿನಲ್ಲೂ ಉತ್ತಮ ಅಂಕಗಳಿಸುವಂತೆ ಹುರಿದುಂಬಿಸುವ ಪೋಷಕರು ನಾವಾಗುವ ಬೇಕು ಎಂದು ಅಂತರ್ರಾಷ್ಟೀಯ ಜಾದೂಗಾರ ಲೇಖಕ ಓಂಗಣೇಶ್ ಉಪ್ಪುಂದ ಹೇಳಿದರು.

ನಾವುಂದ ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಕಾಲೇಜಿನ ರಕ್ಷಕ ಶಿಕ್ಷಕರ ಮಹಾ ಸಭೆಯಲ್ಲಿ ವಿದ್ಯಾಥಿಗಳ ಹೆತ್ತವರ ಹೊಣೆಗಾರಿಕೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಕೆ ಶಾಂತಾರಾಮ್ ಪ್ರಸ್ತಾವಿಕ ಮಾತನಾಡುತ್ತಾ ಶಿಕ್ಷಣಸಂಸ್ಥೆಗಳಿಗೆ ಪೋಷಕರ ನಿರಂತರ ಸಂಪರ್ಕದಿಂದ ವಿದ್ಯಾರ್ಥಿಗಳಿಗೂ ಉಪನ್ಯಾಸಕರಿಗೂ ಸ್ಪೂರ್ತಿ ಹೆಚ್ಚುತ್ತದೆ ಹಾಗೂ ಜವಾಬ್ದಾರಿ ಬೆಳೆಯುತ್ತದೆ ಇದೇ ಉದ್ದೇಶಕ್ಕಾಗಿ ಇಂದು ಸಭೆ ಹಮ್ಮಿಕೊಂಡಿದ್ದೇವೆ ಎಂದರು.

ಕಾಲೇಜಿನ ಪ್ರಧಾನ ಸಂಚಾಲಕ ಸಿಲ್ವೆಸ್ಟರ್ ಡಿ ಅಲ್ಮೇಡಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಸಂಸ್ಥೆಯ ಪರಿಶೃಮವನ್ನು ಹಾಗೂ ವಿದ್ಯಾರ್ಥಿಗಳಿಗೆ ನೀಡಿದ ಕೊಡುಗೆಗಳನ್ನು ವಿವರಿಸಿ ಪೋಷಕರ ಸಹಕಾರ ಕೋರಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಂಜು ಪೂಜಾರಿ ನಾವುಂದ ಉಪಸ್ಥಿತರಿದ್ದರು.

ಉಪನ್ಯಾಸಕಿಯರಾದ ರೇಷ್ಮಾ ಜೆ ಶೆಟ್ಟಿ ಸ್ವಾಗತಿಸಿದರು, ಶ್ರೀಮತಿ ರೇಣುಕಾ ಅತಿಥಿಗಳನ್ನು ಪರಿಚಯಿಸಿ ಕುಮಾರಿ ಶೃದ್ಧಾ ನಿರೂಪಿಸಿದರು. ಪ್ರೀತಿ ವಂದಿಸಿದರು.

Exit mobile version