Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಪ್ರತಿಷ್ಠಿತ ಭಂಡಾರ್ಕಾರ್ಸ್ ಕಾಲೇಜಿಗೆ ನ್ಯಾಕ್ ‘ಎ’ ಶ್ರೇಣಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಇಲ್ಲಿನ ಪ್ರತಿಷ್ಠಿತ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಮಿತಿ (ನ್ಯಾಕ್)ಯಿಂದ 4 ಅಂಕದಲ್ಲಿ 3.32 ಅಂಕದೊಂದಿಗೆ ‘ಎ’ ಶ್ರೇಣಿ ದೊರೆತಿದ್ದು ಕಾಲೇಜಿನ ಕೀರ್ತಿ ಮುಕುಟಕ್ಕೊಂದು ಗರಿ ಸೇರಿದಂತಾಗಿದೆ.

ಈ ಬಗ್ಗೆ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಪ್ರಾಂಶುಪಾಲರಾದ ಡಾ. ಎನ್. ಪಿ ನಾರಾಯಣ ಶೆಟ್ಟಿ ಮಾತನಾಡಿ, ಕಾಲೇಜಿನ ಸಮಗ್ರ ಗುಣಮಟ್ಟವನ್ನು ಪರಿಶೀಲಿಸಿ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಮಿತಿ ’ಎ’ ಶ್ರೇಣಿಯ ಮಾನ್ಯತೆ ನೀಡಿದೆ. ಇದರೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಸ್ವಾಯತ್ತ ಕಾಲೇಜುಗಳನ್ನು ಹೊರತುಪಡಿಸಿದರೆ, ಭಂಡಾರ್ಕಾರ್ಸ್ ಅತ್ಯುತ್ತಮ ಗುಣಮಟ್ಟ ಹೊಂದಿರುವ ಕಾಲೇಜು ಎಂಬ ಕೀರ್ತಿಯನ್ನು ಗಳಿಸಿಕೊಂಡಿದೆ ಎಂದು ತಿಳಿಸಿದರು.

ಭಂಡಾರ್ಕಾರ್ಸ್ ಕಾಲೇಜಿನ ಸಮಗ್ರ ಶೈಕ್ಷಣಿಕ ಗುಣಮಟ್ಟ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಪರಿಗಣಿಸಿ ನ್ಯಾಕ್ ಸಮಿತಿ ಅಂಕಗಳನ್ನು ನೀಡುತ್ತದೆ. ಕಳೆದ ಆರು ವರ್ಷಗಳ ಹಿಂದೆ ಕಾಲೇಜಿಗೆ ‘ಎ’ ಗ್ರೇಡ್‌ನೊಂದಿಗೆ 3.24 ಅಂಕಗಳೊಂದಿಗೆ ನ್ಯಾಕ್ ಮಾನ್ಯತೆ ದೊರತಿತ್ತು. ಈ ಭಾರಿ ಮರುಮೌಲ್ಯಮಾಪನದಲ್ಲಿ ನ್ಯಾಕ್‌ನಿಂದ 3.32 ಅಂಕ ದೊರೆತಿರುವುದು ಕಾಲೇಜು ಕಳೆದ ಐದು ವರ್ಷಗಳಲ್ಲಿ ಸಾಧಿಸಿದ ಹಲವಾರು ಅಭಿವೃದ್ಧಿ ಯೋಜನೆಗಳು ಹಾಗೂ ಗುಣಾತ್ಮಕವಾದ ಅಂಶಗಳು ಕಾರಣವಾಗಿದ್ದು, ಇವು ನ್ಯಾಕ್ ಶ್ರೇಣಿ ನೀಡಲು ಪ್ರಮುಖ ಮಾನದಂಡವಾಗಿತ್ತು ಎಂದು ವಿವರಿಸಿದರು.

ಕಾಲೇಜಿನ ಸಾಧನೆಗೆ ಎಲ್ಲರ ಸಹಭಾಗಿತ್ವೇ ಕಾರಣವಾಗಿದ್ದು, ಸಂಸ್ಥೆಯ ಪ್ರಗತಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಕಾಲೇಜಿನ ನ್ಯಾಕ್ ಸಂಯೋಜಕ ಡಾ. ನಟರಾಜ್ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಮಲತಾ ಉಪಸ್ಥಿತರಿದ್ದರು.

 

Exit mobile version