ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಾಹಿತ್ಯದ ರಚನೆ ಸ್ವಹಿತಾಸಕ್ತಿಯಿಂದ ಕೂಡಿರದೆ, ಅದರಿಂದ ಸಮಾಜ ಸುಧಾರಣೆ ಹಾಗೂ ವ್ಯಕ್ತಿತ್ವ ವಿಕಸನವಾಗಬೇಕೆಂಬ ತುಡಿತ ಪ್ರತಿಯೊಬ್ಬ ಶ್ರೇಷ್ಠ ಸಾಹಿತಿಯದ್ದಾಗಿರುತ್ತದೆ. ಮೌಲ್ಯಾಧಾರಿತ ಬರಹಗಳು ಜಾತಿ, ಧರ್ಮದ ಎಲ್ಲೆ ಮೀರಿ ಸಾರ್ವಕಾಲಿಕವಾಗಿ ಪ್ರಸ್ತುತವಾಗಿರುತ್ತವೆ. ಸಾಮಾಜಿಕ ಕಳಕಳಿಯಿಂದ ಕೂಡಿದ ಸಾಹಿತ್ಯ ರಚಿಸಿದ ಮೊಗೇರಿ ಗೋಪಾಲಕೃಷ್ಣ ಅಡಿಗರ ದೂರದೃಷ್ಟಿ ಇಂದಿನ ಯುವಪೀಳಿಗೆಗೆ ದಾರಿದೀಪವಾಗಿದೆ ಎಂದು ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಹೇಳಿದರು.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಬೈಂದೂರು ಇವರ ಸಹಯೋಗದಲ್ಲಿ ನಡೆದ ಪ್ರೋ. ಮೊಗೇರಿ ಗೋಪಾಲಕೃಷ್ಣ ಅಡಿಗರ ಜನ್ಮ ಶತಾಬ್ದ ಸರಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಧುನಿಕತೆಯ ಮೋಡಿಯಲ್ಲಿ ಇಂದು ಯುವಜನಾಂಗ ಕಲೆ, ಸಾಹಿತ್ಯ, ಸಂಗೀತ ಮೊದಲಾದುವುಗಳಿಂದ ದೂರವಾಗುತ್ತಿದೆ. ಸ್ಪಷ್ಟವಾದ ಗುರಿಯಾಗಲೀ, ಪರಿಪೂರ್ಣವಾದ ಜ್ಞಾನಪ್ರಾಪ್ತಿ ಕಡೆಗಾಗಲೀ ಯೋಚಿಸದೆ ಕೇವಲ ಪದವಿ ಪಡೆಯುವ ವ್ಯಾಮೋಹ ಹೆಚ್ಚುತ್ತಿದೆ. ಬದುಕಿನಲ್ಲಿ ಹೋರಾಟದ ಮನೋಭಾವನೆ ಬೆಳೆಸಿಕೊಂಡು ಅನ್ಯಾಯದ ವಿರುದ್ಧ ಸಿಡಿದೇಳುವ ಕೆಚ್ಚು ಎಲ್ಲರಲ್ಲೂ ಮೂಡಬೇಕೆಂಬ ಹಂಬಲ ಅಡಿಗರದ್ದಾಗಿತ್ತು. ಕಂಡದ್ದನ್ನು ಕಂಡಂತೆ ಹೇಳುವ ನಿಷ್ಠುರತೆ ಹೊಂದಿದ್ದ ಅವರು ಸಮಾಜದ ಹಲವು ಅಂಕುಡೊಂಕುಗಳನ್ನು ತಿದ್ದುವ ನಿಟ್ಟಿನಲ್ಲಿ ತಮ್ಮ ಸಾಹಿತ್ಯವನ್ನು ಸಶಕ್ತವಾಗಿ ಬಳಸಿಕೊಂಡರು ಎಂದು ಅಭಿಪ್ರಾಯಪಟ್ಟರು.
ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಗುರುಮೂರ್ತಿ ತಾಮ್ರಗೌರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ವಿಶ್ರಾಂತ ಪ್ರಾಧ್ಯಾಪಕ ಸಿ. ಉಪೇಂದ್ರ ಸೋಮಯಾಜಿ, ಹಿರಿಯ ಗಾಯಕ ಚಂದ್ರಶೇಖರ ಕೆದಿಲಾಯ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸೂರಾಲು ನಾರಾಯಣ ಮಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅನಂತರ ಗಾಯಕ ಚಂದ್ರಶೇಖರ ಕೆದಿಲಾಯ ಅವರಿಂದ ಅಡಿಗರ ಗೀತಗಾಯನ ಕಾರ್ಯಕ್ರಮ ನಡೆಯಿತು. ಉಪನ್ಯಾಸಕ ಸತೀಶ ಎಂ. ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಪ್ರಕಾಶ ಹೆಬ್ಬಾರ್ ವಂದಿಸಿದರು.