Kundapra.com ಕುಂದಾಪ್ರ ಡಾಟ್ ಕಾಂ

ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್‌ನಲ್ಲಿ ಮೂರು ಚಿನ್ನ ಗೆದ್ದ ಕುಂದಾಪುರದ ವಿಶ್ವನಾಥ್ ಗಾಣಿಗ

ಸೋಮಶೇಖರ್ ಪಡುಕೆರೆ. ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಈಗಾಗಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ಕುಂದಾಪುರ ತಾಲೂಕಿನ ವಿಶ್ವನಾಥ್‌ ಭಾಸ್ಕರ ಗಾಣಿಗ, ದಕ್ಷಿಣ ಆಫ್ರಿಕಾದ ಪೊಷೆಫ್‌ಸ್ಟ್ರೂಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರು ಚಿನ್ನ ಹಾಗೂ 1 ಬೆಳ್ಳಿ ಪದಕ ಗೆದ್ದಿದ್ದಾರೆ. 83 ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ವಿಶ್ವನಾಥ್‌, ಸ್ಕ್ವಾಟ್‌, ಡೆಡ್‌ಲಿಫ್ಟ್‌ ಹಾಗೂ ಸಮಗ್ರ ವಿಭಾಗದಲ್ಲಿ ಚಿನ್ನ ಗೆದ್ದರೆ, ಬೆಂಚ್‌ಪ್ರೆಸ್‌ನಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಕೊಯಮತ್ತೂರಿನಲ್ಲಿ ನಡೆದ ಏಷ್ಯನ್‌ ಪವರ್‌ಲಿಫ್ಟಿಂಗ್‌ನಲ್ಲಿ ಪದಕ ಗೆಲ್ಲುವ ಮೂಲಕ ವಿಶ್ವನಾಥ್‌ ಮೊದಲ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದರು. ರಾಜ್ಯ, ವಿಶ್ವವಿದ್ಯಾಲಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವು ದಾಖಲೆಗಳನ್ನು ಬರೆದು ದೇಶದ ಬಲಿಷ್ಠ ಪುರುಷ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಪ್ರತಿಕೂಲ ಹವಾಮಾನ:
ಪೊಷೆಫ್‌ಸ್ಟ್ರೂಮ್‌ನಿಂದ ಮಾತನಾಡಿದ ವಿಶ್ವನಾಥ್‌, ”ಇಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳಲು ಕಷ್ಟವಾಯಿತು. ಇದರಿಂದಾಗಿ ಬೆಂಚ್‌ಪ್ರೆಸ್‌ನಲ್ಲಿ ಎತ್ತಿದ ಭಾರ ಕಡಿಮೆಯಾಯಿತು. ಸ್ಕ್ವಾಟ್‌ನಲ್ಲಿ 270 ಕೆಜಿ, ಬೆಂಚ್‌ಪ್ರೆಸ್‌ನಲ್ಲಿ 155 ಕೆಜಿ ಹಾಗೂ ಡೆಡ್‌ಲಿಫ್ಟ್‌ನಲ್ಲಿ 302.5 ಕೆಜಿ ಭಾರ ಎತ್ತಿದೆ. ಸ್ಕ್ವಾಟ್‌ನಲ್ಲಿ 305 ಕೆಜಿ, ಬೆಂಚ್‌ಪ್ರೆಸ್‌ನಲ್ಲಿ 162.5 ಕೆಜಿ ಹಾಗೂ ಡೆಡ್‌ಲಿಫ್ಟ್‌ನಲ್ಲಿ 310 ಕೆಜಿ ನನ್ನ ವೈಯಕ್ತಿಕ ಉತ್ತಮ ಸಾಧನೆ. ಈ ಬಾರಿ ಬೆಂಚ್‌ಪ್ರೆಸ್‌ನಲ್ಲಿ 162.5 ಕೆಜಿ ಭಾರವೆತ್ತಿ ಬೆಳ್ಳಿ ಗೆದ್ದಿದ್ದೇನೆ. ಸ್ಕ್ವಾಟ್‌ನಲ್ಲಿ ಚಿನ್ನ ಹಾಗೂ ಡೆಡ್‌ಲಿಫ್ಟ್‌ನಲ್ಲೂ ಅಗ್ರಸ್ಥಾನ ಪಡೆದೆ,” ಎಂದರು.

ಬೆಂಗಳೂರಿನಲ್ಲಿ ಜಿಟಿ ನೆಕ್ಸಸ್‌ ಸಾಫ್ಟವೇರ್‌ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ವಿಶ್ವನಾಥ್‌ಗೆ ಕಂಪನಿ ಪ್ರೋತ್ಸಾಹ ನೀಡಿದೆ. ರೆಡ್‌ ಕೇಜ್‌ ಜಿಮ್‌ ಹಾಗೂ ಸೂಪರ್‌ ಬಾಡೀಸ್‌ ಜಿಮ್‌ನಲ್ಲಿ ತರಬೇತಿ ಪಡೆಯುತ್ತಿರುವ ವಿಶ್ವನಾಥ್‌ಗೆ ಸುಜಯ್‌ ಜನಾರ್ಧನ್‌, ಸುಬ್ರಹ್ಮಣ್ಯ ಹಾಗೂ ಹರೀಶ್‌ ಸಿಂಗ್‌ ಮಾರ್ಗದರ್ಶನ ನೀಡುತ್ತಿದ್ದಾರೆ. ಕರ್ನಾಟಕ ಪವರ್‌ಲಿಫ್ಟಿಂಗ್‌ ಸಂಸ್ಥೆಯ ಸತೀಶ್‌ ಕುಮಾರ್‌ ಕುದ್ರೋಳಿ ಅವರ ನೆರವಿನಿಂದಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲಲು ಸಾಧ್ಯವಾಯಿತು ಎಂದು ವಿಶ್ವನಾಥ್‌ ಹೇಳಿದ್ದಾರೆ. ಕುಂದಾಪುರದ ದೇವಳಕುಂದ ಬಾಳಿಕೆರೆಯ ಭಾಸ್ಕರ್‌ ಗಾಣಿಗ ಹಾಗೂ ಪದ್ಮಾವತಿ ಅವರ ಪುತ್ರರಾಗಿರುವ ವಿಶ್ವನಾಥ್‌, ಮರದ ದಿಮ್ಮಿಗಳನ್ನು ಲಾರಿಗೆ ತುಂಬಿಸುವ ಕೆಲಸ ಮಾಡುತ್ತಿದ್ದ ಕಾರಣ ವೇಟ್‌ಲಿಫ್ಟಿಂಗ್‌ನಲ್ಲಿ ಯಶಸ್ಸು ಕಾಣಲು ಸಾಧ್ಯವಾಯಿತು ಎಂದು ತಮ್ಮ ಆರಂಭಿಕ ದಿನಗಳನ್ನು ಸ್ಮರಿಸಿದ್ದಾರೆ.

ಸಾಲ ಮಾಡಿ ದಕ್ಷಿಣ ಆಫ್ರಿಕಾಕ್ಕೆ:
ಕಾಮನ್‌ವೆಲ್ತ್‌ ಪವರ್‌ಲಿಫ್ಟಿಂಗ್‌ನಲ್ಲಿ ಪಾಲ್ಗೊಳ್ಳಲು ವಿಶ್ವನಾಥ್‌ ಭಾರತೀಯ ಪವರ್‌ ಲಿಫ್ಟಿಂಗ್‌ ಫೆಡರೇಷನ್‌ಗೆ 1.80 ಲಕ್ಷ ರೂ. ಭರಿಸಬೇಕಾಗಿತ್ತು. ಫೆಡರೇಷನ್‌ ಆರಂಭದಲ್ಲಿ ಪ್ರಕಟಿಸಿದ 23 ವೇಟ್‌ಲಿಫ್ಟರ್‌ಗಳ ಪಟ್ಟಿಯಲ್ಲಿ ವಿಶ್ವನಾಥ್‌ ಅವರ ಹೆಸರಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಹಣ ಹೊಂದಿಸಲು ಅಸಾಧ್ಯವಾದುದು. ಆಗ ಅವಕಾಶ ತಪ್ಪಿಹೋಗುತ್ತದೆ ಎಂಬ ಕಾರಣದಿಂದ ಬ್ಯಾಂಕ್‌ನಲ್ಲಿ ಸಾಲಕ್ಕೆ ಅರ್ಜಿ ಹಾಕಿದರು. ಕೊನೆ ಕ್ಷಣದಲ್ಲಿ ಸಾಲ ಮಂಜೂರಾಗಿ ಆ ಹಣದಿಂದ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡರು.

ಕೃಪೆ: ವಿಜಯ ಕರ್ನಾಟಕ

Exit mobile version