Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಸಾಂತ್ವಾನ ಕೇಂದ್ರದಲ್ಲಿ ಪ್ರೇಮಿಗಳಿಗೆ ಕಂಕಣ ಭಾಗ್ಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನೆರಮನೆಯ ಯುವಕ-ಯುವತಿ ನಡುವೆ ಹುಟ್ಟಿದ ಪ್ರೀತಿಗೆ ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಕುಂದಾಪುರ ಮಹಿಳಾ ಸಾಂತ್ವಾನ ಕೇಂದ್ರ ಆಸರೆಯಾಗಿದ್ದು, ಸಾಂತ್ವಾನ ಕೇಂದ್ರದಲ್ಲಿ ವಿವಾಹ ಆಗುವ ಮೂಲಕ ದಾಂಪತ್ಯ ನವ ಜೀವನಕ್ಕೆ ಕಾಲಿಟ್ಟರು.

ತಾಲೂಕಿನ ತ್ರಾಸಿ ಗ್ರಾಮದ ನಿವಾಸಿ ಮಣಿಕಂಠ ಎಂಬವರ ಪುತ್ರ ರಾಘವೇಂದ್ರ ಪೂಜಾರಿ (೨೯) ಹಾಗೂ ನೆರೆಮನೆ ನಿವಾಸಿ ಲಕ್ಷ್ಮಣ್ ಎಂಬವರ ಪುತ್ರಿ ವಸಂತಿ ಖಾರ್ವಿ (೨೪) ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಜೋಡಿ. ರಾಘವೇಂದ್ರ ಮೀನುಗಾರಿಕಾ ವೃತ್ತಿ ಮಾಡಿಕೊಂಡಿದ್ದು, ವಸಂತಿ ಕುಂದಾಪುರ ಪುಸ್ತಕ ಮಳಿಗೆಯಲ್ಲಿ ಕೆಲಸದಲ್ಲಿದ್ದರು. ಇಬ್ಬರೂ ಕಳೆದ ೨೦ ವರ್ಷದಿಂದ ಒಡನಾಡಿಗಳಾಗಿದ್ದು, ಎರಡು ವರ್ಷದಿಂದ ಇಬ್ಬರಲ್ಲಿ ಪ್ರೇಮಾಂಕುರವಾಗಿತ್ತು. ಆರು ತಿಂಗಳ ಹಿಂದೆ ಇಬ್ಬರೂ ಮದುವೆ ನಿರ್ಧಾರಕ್ಕೆ ಬಂದಿದ್ದರು. ಇಬ್ಬರೂ ಬೇರೆ ಬೇರೆ ಜಾತಿಗೆ ಸೇರಿದ್ದರಿಂದ ಎರಡೂ ಮನೆಯವರು ಮದುವೆ ವಿರೋಧಿಸಿದ್ದರು.

ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಮದುವೆ ಮಾಡಿಸುವಂತೆ ಕುಂದಾಪುರ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಸಾಂತ್ವಾನ ಕೇಂದ್ರ ಅಧ್ಯಕ್ಷೆ ಇಬ್ಬರಿಗೂ ಸಾಂತ್ವಾನ ಕೇಂದ್ರದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಸಿದಿರು.

ಕುಂದಾಪುರ ಮಹಿಳಾ ಸಾಂತ್ವಾನ ಕೇಂದ್ರ ಅಧ್ಯಕ್ಷೆ ರಾಧಾದಾಸ್, ಆನಗಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮರಿಯಾ ಡಿಸೋಜಾ, ಗುತ್ತಿಗೆದಾರ ಮಾರ್ಕೋಡು ಸುಧೀರ್ ಕುಮಾರ್ ಶೆಟ್ಟಿ, ಸಾಂತ್ವಾನ ಕೇಂದ್ರ ಕೋಶಾಧಿಕಾರಿ ಶೃಂಗಾರಿ ಟೀಚರ್, ಸಮಾಜ ಸೇವಕಿ ಶಾಂತಿ, ಸಿಬ್ಬಂದಿಗಳಾದ ಆರತಿ ಹಾಗೂ ವಿದ್ಯಾ ಇದ್ದರು.

ಯುವಕ ಹಾಗೂ ಯುವತಿ ಬೇರೆ ಬೇರೆ ಜಾತಿಯವರಾಗಿದ್ದು, ಮದುವೆಗೆ ಮನೆಯವರ ವಿರೋಧಿ ವ್ಯಕ್ತ ಪಡಿಸಿದ್ದರಿಂದ ಮದುವೆ ಮಾಡಿಸುವಂತೆ ಸಾಂತ್ವಾನ ಕೇಂದ್ರಕ್ಕೆ ಮನವಿ ಮಾಡಿದ್ದರು. ಪ್ರೇಮಿಗಳಿಬ್ಬರೂ ವಯಸ್ಕರಾಗಿದ್ದು, ಇಬ್ಬರೂ ಸ್ವಾಇಚ್ಛೆಯಿಂದ ವಿವಾಹ ಆಗುವ ಆಶಯ ವ್ಯಕ್ತ ಪಡಿಸಿದ್ದರಿಂದ ಸಾಂತ್ವಾನ ಕೇಂದ್ರದಲ್ಲಿ ಸಂಪ್ರದಾಯದಂತೆ ವಿವಾಹ ಮಾಡಿಸಿದ್ದು, ವಿವಾಹ ನೋಂದಣಿ ಕಚೇರಿಯಲ್ಲೂ ಮದುವೆ ರಿಜಿಷ್ಟೇಶನ್ ಮಾಡಿಸಲಾಗುತ್ತದೆ. – ರಾಧಾದಾಸ್, ಅಧ್ಯಕ್ಷ, ಮಹಿಳಾ ಸಾಂತ್ವಾನ ಕೇಂದ್ರ, ಕುಂದಾಪುರ.

 

Exit mobile version