Kundapra.com ಕುಂದಾಪ್ರ ಡಾಟ್ ಕಾಂ

ಸಕಾರಾತ್ಮಕ ಚಿಂತನೆಯಿಂದ ನಿವೃತ್ತಿ ಬಳಿಕವೂ ಬದುಕು ಸಂಮೃದ್ಧ: ಡಾ. ಸುಬ್ರಹ್ಮಣ್ಯ ಭಟ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಚನಾತ್ಮಕ ಮತ್ತು ಸಕಾರಾತ್ಮಕತೆ ಚಿಂತನೆಯೊಂದಿಗೆ ಬದುಕು ಸಾಗಿಸಿದರೆ, ನಿವೃತ್ತಿಯಾದರೂ ಖಾಲಿತನ ಕಾಡದು. ನಮ್ಮ ಜೀವನದ ಒಂದು ಭಾಗವಾಗಿ ನಾವು ಮಾಡುವ ವೃತ್ತಿ ಬದುಕಿಗೆ ಮಾತ್ರ ನಿವೃತ್ತಿ ಸೀಮಿತವಾಗಿರುತ್ತದೆಯೇ ಹೊರತು ನಮ್ಮ ಕೌಟುಂಬಿಕ ಹಾಗೂ ಸಾಮಾಜಿಕ ಜೀವನಕ್ಕಲ್ಲ ಎಂದು ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಹೇಳಿದರು.

ಬೈಂದೂರು ಅಂಚೆ ಕಛೇರಿಯಲ್ಲಿ ಸ್ವಯಂ ಸೇವಾ ನಿವೃತ್ತಿ (ವಿಆರ್‌ಎಸ್) ಪಡೆದ ಅಂಚೆಪೇದೆ (ಪೋಷ್ಟ್‌ಮ್ಯಾನ್) ಎಸ್. ಶಾಂತಾನಂದ ಪ್ರಭು ಇವರ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಭು ದಂಪತಿಗಳನ್ನು ಅಭಿನಂದಿಸಿ ಮಾತನಾಡಿದರು. ಸಾಮಾನ್ಯರೊಂದಿಗೆ ಬೆರೆಯುವುದು, ಅವರ ನೋವು ನಲಿವುಗಳಲ್ಲಿ ಭಾಗಿಯಾಗುವುದರಿಂದ ಜನರ ಹೃದಯಕ್ಕೆ ಹತ್ತಿರವಾಗಬಲ್ಲರು ಮತ್ತು ಸರಳವಾಗಿ ಜನರ ಮಧ್ಯೆ ಹೋಗುವುದರಿಂದಲೇ ಜನಮನ್ನಣೆ ಗಳಿಸಲು ಸಾಧ್ಯವಾಗುವುದು. ಈ ನಿಟ್ಟಿನಲ್ಲಿ ಶಾಂತಾನಂದ ಪ್ರಭು ಇವರು ಕ್ರೀಯಾಶೀಲ ವ್ಯಕ್ತಿತ್ವ, ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿ ಜನಪರ ನಿಲುವನ್ನು ಹೊಂದಿದ್ದು, ಇತರರಿಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಅಂಚೆ ಅಧೀಕ್ಷಕ ರಾಜಶೇಖರ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಎಸ್. ಶಾಂತಾನಂದ ಪ್ರಭು ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂಚೆಪೇದೆ ಶಂಕರ ನಾಯ್ಕ್ ತಮ್ಮ ಸಹಪಾಠಿಯ ಕುರಿತಾದ ಅನಿಸಿಕೆ ಹಂಚಿಕೊಂಡರು. ಅಂಚೆ ಉಪ ಅಧೀಕ್ಷಕ ನಾರಾಯಣ, ನಿವೃತ್ತ ಉಪನ್ಯಾಸಕ ಪಿ. ಶೇಷಪ್ಪಯ್ಯ ಹೆಬ್ಬಾರ್, ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ಬಿ. ವೆಂಕಟೇಶ ಕಾರಂತ್ ಉಪಸ್ಥಿತರಿದ್ದರು. ಖಂಬದಕೋಣೆ ಅಂಚೆ ಪಾಲಕಿ ಸುಮಾ ಅರುಣ್‌ಕುಮಾರ್ ಪ್ರಾರ್ಥಿಸಿದರು. ಸುರೇಶ ಕುಮಾರ್ ಸ್ವಾಗತಿಸಿ, ದಯಾನಂದ ಪಿ. ನಿರೂಪಿಸಿದರು. ಬೈಂದೂರು ಅಂಚೆ ಪಾಲಕ ಮಂಜುನಾಥ ವಂದಿಸಿದರು.

 

Exit mobile version