ಕ್ಷೇತ್ರದ ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ: ಶಾಸಕ ಗೋಪಾಲ ಪೂಜಾರಿ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಾಮಾಜಿಕವಾಗಿ ಧ್ವನಿಯಿಲ್ಲದ, ಶಕ್ತಿಯಿಲ್ಲದ ಜನರಿಗೆ ಸಮಸ್ಯೆ ಹೇಳಿಕೊಳ್ಳಲು ಜನಸಂಪರ್ಕ ಸಭೆಗಳ ಮೂಲಕ ಸರಕಾರ ನೇರ ಅವಕಾಶ ಕಲ್ಪಿಸಿದೆ. ಇಲ್ಲಿ ಜನರೇ ಸಾಹೇಬರು ಎಂಬುದನ್ನು ಗಮನದಲ್ಲಿಟ್ಟುಕೊಂಡು ಜನಪ್ರತಿನಿಧಿಗಳು ಅಧಿಕಾರಿಗಳೊಂದಿಗೆ ಬಂದು ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಜನಸಂಪರ್ಕ ಸಭೆಗಳ ಮೂಲಕ ಸಾವಿರಾರು ಮಂದಿ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ತಾಲೂಕು ಆಡಳಿತದಿಂದ ಇಲ್ಲಿನ ಯಡ್ತರೆ ಜೆಎನ್‌ಆರ್ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಬೈಂದೂರು ಹೋಬಳಿ ಮಟ್ಟದ ಜನಸಂಪರ್ಕ ಸಭೆಗೆ ಚಾಲನೆ ನೀಡಿ ಮಾತನಾಡಿಜನರ ತೆರಿಗೆ ಹಣದಿಂದ ಸಂಬಳ ಪಡೆಯುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವಾಗಲೂ ಜನರ ಸೇವಕರೇ ಆಗಿರುತ್ತಾರೆ. ಜನರಿಗೆ ಅಗತ್ಯವಾದ ಸೌಕರ್ಯವನ್ನು ಸೂಕ್ತ ಸಮಯದಲ್ಲಿ ಒದಗಿಸುವುದು ನಮ್ಮಲ್ಲರ ಕರ್ತವ್ಯ ಎಂದರು.
ರಾಜ್ಯ ಕಾಂಗ್ರೆಸ್ ಸರಕಾರ ಬಂದ ಬಳಿಕ ಜಿಲ್ಲೆಯಲ್ಲಿ ಹೊಸತಾಗಿ ೬೬,೦೦೦ ಜನರಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. ಬಿಪಿಎಲ್ ಕಾರ್ಡ್ ಪಡೆಯಲು ಇದ್ದ ಎಲ್ಲಾ ಮಾನದಂಡವನ್ನೂ ಸಡಿಲಿಸಿ ಎರಡು ಅಂಶಗಳನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಹಕ್ಕುಪತ್ರ ಪಡೆಯುವ ಪ್ರತಿಯೊಬ್ಬರಿಗೂ ಹಾಗೂ ಬಡ ಕುಟುಂಬದವರಿಗೂ ಮನೆ, ಬಾವಿ, ಕೋಳಿಗೂಡು, ಕೊಟ್ಟಿಗೆ ಸೇರಿದಂತೆ ಎಲ್ಲದಕ್ಕೂ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಸ್ವ-ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹಧನ ನಿಗದಿಪಡಿಸಲಾಗಿದೆ. ಬೈಂದೂರು ಕ್ಷೇತ್ರದ ರಸ್ತೆ, ಸೇತುವೆ ಹಾಗೂ ಮೀನುಗಾರಿಕೆ ಪ್ರೋತ್ಸಾಹಕ್ಕೆ ವಿವಿಧ ಕಾರ್ಯಕ್ರಮಗಳ ಮೂಲಕ ಅನುದಾನ ನೀಡಲಾಗಿದೆ ಎಂದವರು ಹೇಳಿದರು.
ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮ ಮಟ್ಟದಲ್ಲಿ ಜನಸ್ಪಂದನ ಸಭೆಗಳನ್ನು ಆಯೋಜಿಸುವ ಮೂಲಕ ಪ್ರತಿ ಜನರ ಸಮಸ್ಯೆಗಳನ್ನು ಬಗೆಹರಿಸುವ ಪಯತ್ನವನ್ನು ಪ್ರಾಮಾಣಿಕವಾಗಿ ಮಾಡಲಾಗಿದೆ. ಈವರೆಗೆ ೨೮೦೦ ಮಂದಿ ಅಕ್ರಮ ಸಕ್ರಮ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ನಿರಂತರವಾಗಿ ಆಗುತ್ತಿದೆ. ಆಡಳಿತವೇ ಜನರ ಮುಂದೆ ಬಂದು ಸಮಸ್ಯೆಗೆ ಪರಿಹಾರ ಹುಡುಕುವ ಕೆಲಸ ಮಾಡುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್, ಜಿಲ್ಲಾ ಕೆಡಿಪಿ ಸದಸ್ಯ ಎಸ್ ರಾಜು ಪೂಜಾರಿ, ತಾಲೂಕು ಪಂಚಾಯತ್ ಸದಸ್ಯರಾದ ಜಗದೀಶ್ ದೇವಾಡಿಗ, ವಿಜಯ ಶೆಟ್ಟಿ, ಪ್ರಮಿಳಾ ದೇವಾಡಿಗ, ಪುಪ್ಪರಾಜ್ ಶೆಟ್ಟಿ, ದಸ್ತಗಿರಿ ಸಾಹೇಬ್, ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.