Kundapra.com ಕುಂದಾಪ್ರ ಡಾಟ್ ಕಾಂ

ಬಿದ್ಕಲ್‌ಕಟ್ಟೆ ಶಾಲೆ : ಶಿಕ್ಷಕರಿಗೆ ಗೌರವಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪರದ ರೋಟರಿ ಕ್ಲಬ್ ಮಿಡ್‌ಟೌನ್ ಇವರಿಂದ ನೇಷನ್ ಬಿಲ್ಡರ್ ಅವಾರ್ಡ್‌ಗೆ ಭಾಜನರಾದ ಬಿದ್ಕಲ್‌ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಸತೀಶ ಶೆಟ್ಟಿಗಾರರಿಗೆ ಶಾಲಾ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ, ಪೋಷಕರು ಹಾಗೂ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಗೌರವಾರ್ಪಣೆ ಹಾಗೂ ಅಭಿನಂದನಾ ಸಮಾರಂಭವು ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕುಲಾಲರ ಅಧ್ಯಕ್ಷತೆಯಲ್ಲಿ ಜರುಗಿತು.

ಮೊಳಹಳ್ಳಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ದಿನಪಾಲ ಶೆಟ್ಟಿಯವರು ಸತೀಶ ಶೆಟ್ಟಿಗಾರರನ್ನು ಫಲ ಪುಷ್ಪಗಳನ್ನಿತ್ತು ಗೌರವಿಸಿದರು. ನಂತರ ಮಾತನಾಡಿದ ಅವರು ’೧೯೯೮ರಲ್ಲಿ ಮೊಳಹಳ್ಳಿ ಶಾಲೆಯಿಂದ ಸೇವೆ ಪ್ರಾರಂಭಿಸಿದ ಶೆಟ್ಟಿಗಾರರು ತಮ್ಮ ಕ್ರಿಯಾಶೀಲ ವ್ಯಕ್ತಿತ್ವದ ಮೂಲಕ ಮಾದರಿ ಶಿಕ್ಷಕರಾಗಿ ಈ ಭಾಗದಲ್ಲಿ ಜನಾನುರಾಗಿಯಾಗಿದ್ದಾರೆ. ಪಠ್ಯಪುಸ್ತಕ ರಚನಾ ಸಮಿತಿ, ಪರಿಷ್ಕರಣಾ ಸಮಿತಿ, ಪ್ರಶ್ನೆ ಪತ್ರಿಕೆ ತಯಾರಿಕೆ, ನಲಿಕಲಿ ಹೀಗೆ ವಿವಿಧ ವಿಷಯಗಳಲ್ಲಿ ರಾಜ್ಯಮಟ್ಟದ ಸಂಪನ್ಮೂಲ ಶಿಕ್ಷಕರಾಗಿ ಸೇವೆಗೈದು ಅನುಭವ ಹೊಂದಿರುವ ಇವರ ಅವಿರತ ಸೇವೆಗೆ ರೋಟರಿ ಮಿಡ್‌ಟೌನ್ ಕುಂದಾಪುರ ಇವರು ನೇಶನ್ ಬಿಲ್ಡರ್ ಅವಾರ್ಡ್ ನೀಡಿ ಗೌರವಿಸಿರುವುದು ನಮಗೆಲ್ಲ ಅತೀವ ಸಂತಸವನ್ನುಂಟುಮಾಡಿದೆ’ ಎಂದರು.

ಸಮಾರಂಭದಲ್ಲಿ ಹಿರಿಯರಾದ ದಿನಪಾಲ ಶೆಟ್ಟಿ, ದಾನಿಗಳಾದ ರಾಘವೇಂದ್ರ ಅಡಿಗ, ಹಳೆವಿದ್ಯಾರ್ಥಿ ಸಂಘದ ಕೋಶಾಧಿಕಾರಿ ದಿವಾಕರ್ ಬಿ, ವಾಹನ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ ಕಾಂಚನ್, ಹಾಲಾಡಿ ಬಿದ್ಕಲ್‌ಕಟ್ಟೆ ಲಯನ್ಸ್ ಕ್ಲಬ್‌ನ ಸದಸ್ಯರಾದ ಅತುಲ್ ಕುಮಾರ್ ಶೆಟ್ಟಿ, ಕಾಳಾವರ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಯಶೋಧ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶಾಂತಾರಾಮ, ಉಪಾಧ್ಯಕ್ಷರಾದ ಸುಧಾಕರ, ಮಾಜಿ ಅಧ್ಯಕ್ಷರಾದ ಪ್ರಕಾಶ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಶ್ರೀಮತಿ ನಾಗರತ್ನ ಉಡುಪ, ಸಹಶಿಕ್ಷಕರುಗಳಾದ ಶ್ರೀ ಸತೀಶ್ ಶೆಟ್ಟಿಗಾರ್, ಶ್ರೀಮತಿ ರಮಣಿ, ಶ್ರೀಮತಿ ಜ್ಯೋತಿಲಕ್ಷ್ಮಿ, ಶ್ರೀಮತಿ ಚಿತ್ರಾ , ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಮಂಜುಳಾ ಶೆಟ್ಟಿ, ಗೌರವ ಶಿಕ್ಷಕಿಯರಾದ ಶ್ರೀಮತಿ ಮಹಾಲಕ್ಷ್ಮೀ, ಶ್ರೀಮತಿ ಭಾರತಿ, ಶ್ರೀಮತಿ ವೇದಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.

ಪ್ರಾರಂಭದಲ್ಲಿ ಮುಖ್ಯಶಿಕ್ಷಕಿ ಗರತ್ನ ಸ್ವಾಗತಿಸಿದರೆ, ಸಹಶಿಕ್ಷಕಿ ಶ್ರೀಮತಿ ರಮಣಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಮಂಜುಳಾ ಶೆಟ್ಟಿ ಶಿಕ್ಷಕ ಸತೀಶ ಶೆಟ್ಟಿಗಾರರ ಸಾಧನಾ ಹಾದಿಯನ್ನು ವಾಚಿಸಿದರು. ಸಹಶಿಕ್ಷಕಿ ಚಿತ್ರಾಕುಮಾರಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version