Kundapra.com ಕುಂದಾಪ್ರ ಡಾಟ್ ಕಾಂ

ಸಂಚಲನ ಹೊಸೂರು ದಶಮಾನೋತ್ಸವ ಕಾರ್ಯಕ್ರಮಗಳಿಗೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಲೆ ಎಂಬುದು ಜಾತಿ, ಪಂಗಡ ಧರ್ಮದ ಪರಿಧಿಯನ್ನು ಮೀರಿ ಎಲ್ಲರನ್ನೂ ಸುಲಭವಾಗಿ ಸೆಳೆಯುವ ಮಾಧ್ಯಮವಾಗಿದ್ದು, ಅದರಲ್ಲಿ ತೊಡಗಿಕೊಳ್ಳುವ ಪ್ರತಿ ಕಲಾವಿದನೂ ಸಮಾಜದಲ್ಲಿ ವಿಶೇಷ ಮನ್ನಣೆಗೆ ಪಾತ್ರನಾಗುತ್ತಾನೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಅವರು ಹೇಳಿದರು.

ಅವರು ಹೊಸೂರು ಪರಿಶಿಷ್ಟ ಪಂಗಡದ ಸಭಾಭವನಲ್ಲಿ ಪರಿಶಿಷ್ಟ ಪಂಗಡದ ರಂಗತಂಡ ಸಂಚಲನ ರಿ. ಹೊಸೂರು ಇದರ ದಶಮಾನೋತ್ಸವದ ಕಾರ್ಯಕ್ರಮಗಳಿಗೆ ಮಡಿಕೆಗೆ ಕಳಸದಲ್ಲಿ ತುಂಬಿದ ಹಾಲೇರೆದು ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿಯೇ ಮೊದಲ ಭಾರಿಗೆ ಪರಿಶಿಷ್ಟ ಪಂಗಡದ ಯುವಕರು ಒಗ್ಗಟ್ಟಾಗಿ ರಂಗತಂಡವನ್ನು ಕಟ್ಟಿರುವುದಲ್ಲದೇ ವರ್ಷಂಪ್ರತಿ ತರಬೇತಿ ಕಾರ್ಯಾಗಾರ, ಉತ್ಸವ, ನಾಟಕ ಪ್ರದರ್ಶನದಂತಹ ಕಾರ್ಯಕ್ರಮಗಳನ್ನು ಹಳ್ಳಿಯಲ್ಲಿಯೇ ಆಯೋಜಿಸುತ್ತಾ ಕಲೆಯ ಬಗೆಗೆ ಹಳ್ಳಿಯ ಜನರಲ್ಲಿ ಆಸಕ್ತಿ ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನಾರ್ಹ. ಕಲಾ ಮಾಧ್ಯಮಕ್ಕೆ ಸಮಾಜ ಹಾಗೂ ವ್ಯವಸ್ಥೆಯನ್ನು ಕಲೆಯ ಮೂಲಕವೇ ಪ್ರಶ್ನಿಸುವ, ಎಚ್ಚರಿಸುವ ಶಕ್ತಿಯಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ರಂಗಕರ್ಮಿ ಯೋಗೀಶ್ ಬಂಕೇಶ್ವರ್, ಮೀನುಗಾರ ಮುಖಂಡ ಮದನ್ ಕುಮಾರ್ ಉಪ್ಪುಂದ, ರಿದಂ ನೃತ್ಯಶಾಲೆಯ ಅಧ್ಯಕ್ಷ ನಾಗರಾಜ ಗಾಣಿಗ ಬಂಕೇಶ್ವರ, ಉದ್ಯಮಿ ಆನಂದ ಶೆಟ್ಟಿ, ಯಡ್ತರೆ ಗ್ರಾ.ಪಂ ಸದಸ್ಯ ಸಿ.ಜೆ ರೋಯಿ ಮೊದಲಾದವರು ಉಪಸ್ಥಿತರಿದ್ದರು.

ಸಂಚಲನ ಹೊಸೂರು ಸಂಸ್ಥೆಯ ಅಧ್ಯಕ್ಷ ತಿಮ್ಮ ಮರಾಠಿ ಸ್ವಾಗತಿಸಿದರು. ಕಾರ್ಯದರ್ಶಿ ನಾಗಪ್ಪ ಮರಾಠಿ ವಂದಿಸಿದರು. ಶಿಕ್ಷಕ ಸುಧಾಕರ ಪಿ. ಬೈಂದೂರು ನಿರೂಪಿಸಿದರು.

Exit mobile version