Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಮಾನಸಿಕ ಆರೋಗ್ಯ ದಿನಾಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಷನ್ ರಿ. ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ ಮತ್ತು ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ಇವರ ಸಂಯಕ್ತ ಆಶ್ರಯದಲ್ಲಿ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಇಲ್ಲಿನ ಶ್ರೀ ಮಾತಾ ಆಸ್ಪತ್ರೆಯಲ್ಲಿ ಜರುಗಿತು.

ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ, ಗೌರವಾನ್ವಿತ ಡಿ.ಪಿ ಕುಮಾರ ಸ್ವಾಮಿ ಇವರು ಕಾರ್ಯಕ್ರಮವನ್ನು ಉದ್ಘಾಟಸಿ, ಮಾನಸಿಕ ರೋಗ ಎಂಬುದು ವ್ಯಕ್ತಿಯ ಮನಸ್ಸಿನ ರೋಗವಾಗಿದ್ದು, ಸಾಮಾಜಿಕ, ಸಾಂಸ್ಕೃತಿಕ, ಭೌತಿಕ, ಶೈಕ್ಷಣಿಕ ಪ್ರಭಾವು ಒಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಮನೋ ವೈದ್ಯಾಧಿಕಾರಿಗಳಿಂದ ಸೂಕ್ತ ಸಲಹೆ ಪಡೆದು, ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳಬೇಕು ಎಂದರು.

ಕುಂದಾಪುರ ಬಾರ್ ಅಸೋಸಿಯೇಷನ್ (ರಿ.) ಕುಂದಾಪುರ ಇದರ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಒಂದು ಅಂದಾಜಿನ ಪ್ರಕಾರ ನಮ್ಮ ಜೀವನದ ಶೇಕಡಾ ೭೦ ರಷ್ಟು ಭಾಗವನ್ನು ಕೆಲಸದಲ್ಲಿ ಕಳೆಯುತ್ತಿದ್ದು, ಕೆಲಸದ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳುವುದರ ಜೊತೆಗೆ ಸಮಯ ಪ್ರಜ್ಞೆಯಿಂದ ಕೆಲಸ ಮಾಡುವುದರಿಂದ ಮನಸ್ಸನ್ನು ಶಾಂತ ಚಿತ್ತದಿಂದ ಇಡಲು ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಶ್ರೀ ಮಾತಾ ಆಸ್ಪತ್ರೆ ಇದರ ವೈದ್ಯಕೀಯ ನಿರ್ದೇಶಕರಾದ, ಡಾ|| ಸತೀಶ ಪೂಜಾರಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ, ಶ್ರೀ ಮಾತಾ ಆಸ್ಪತ್ರೆ, ಕುಂದಾಪುರ ಇಲ್ಲಿಯ ಮನೋವೈದ್ಯರಾದ ಡಾ|| ಪ್ರಕಾಶ್ ಸಿ. ತೋಳಾರ್ ಅವರು ಖಿನ್ನತೆ ಮತ್ತು ಆತಂಕದ ಬಗ್ಗೆ ಮತ್ತು ಡಾ|| ನಿತಿನ್ ಎ ಶೆಟ್ಟಿ ಇವರು ಮೆಂಟಲ್ ಹೆಲ್ತ್ ಇನ್ ವರ್ಕ್ ಪ್ಲೇಸ್ ಎನ್ನುವ ವಿಷಯದ ಕುರಿತು ವಿವರವಾಗಿ ತಿಳಿಸಿದರು.

ಕುಂದಾಪುರ ಬಾರ್ ಅಸೋಸಿಯೇಷನ್ ರಿ. ಕುಂದಾಪುರ ಇದರ ಪ್ರಧಾನ ಕಾರ್ಯದರ್ಶಿ ಎಚ್. ರವೀಶ್ಚಂದ್ರ ಶೆಟ್ಟಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಮಾತಾ ಆಸ್ಪತ್ರೆ, ಕುಂದಾಪುರ ಇಲ್ಲಿಯ ಸಿಬ್ಬಂದಿಗಳಾದ, ಜಾಹ್ನವಿ ಸ್ವಾಗತಿಸಿ, ಮಂಜುಳಾ ಕಾರ್ಯಕ್ರಮ ನಿರೂಪಿಸಿದರು. ಸುಜಾತ ವಂದಿಸಿದರು.

Exit mobile version