Kundapra.com ಕುಂದಾಪ್ರ ಡಾಟ್ ಕಾಂ

ಘನ ದ್ರವ ಸಂಪನ್ಮೂಲ ನಿರ್ವಹಣಾ ಮಾಹಿತಿ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ,
ಕುಂದಾಪುರ: ಮರವಂತೆ ಗ್ರಾಮ ಪಂಚಾಯತ್‌ನಲ್ಲಿ ಮಂಗಳವಾರ ನಡೆದ ಸಾರ್ವಜನಿಕರ ಸಭೆಯಲ್ಲಿ ಘನ ದ್ರವ ಸಂಪನ್ಮೂಲ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು.

ಕಾಪು ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ ಮತ್ತು ಯೋಜನೆಯ ಸಂಯೋಜಕ ಸುಧೀರ್ ಈ ಕುರಿತು ವಿವರವಾದ ಮಾಹಿತಿ ನೀಡಿದರು. ಮನೆ, ಅಂಗಡಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಂಗ್ರಹವಾಗುವ ಘನ, ದ್ರವ ತ್ಯಾಜ್ಯವನ್ನು ಮೂಲದಲ್ಲಿ ಬೇರ್ಪಡಿಸುವ ಅಗತ್ಯತೆ, ಗ್ರಾಮ ಪಂಚಾಯತ್‌ನಿಂದ ಅದರ ಸಂಗ್ರಹ, ನಿರ್ವಹಣಾ ಸ್ಥಳದಲ್ಲಿ ಮರು ಬೇರ್ಪಡಿಸಿ ಸಂಪನ್ಮೂಲವಾಗಿ ಪರಿವರ್ತನೆಯ ವಿಧಾನ, ಸಾರ್ವಜನಿಕರ ಪಾತ್ರ, ಪಾವತಿಸಬೇಕಾದ ಶುಲ್ಕ, ಇತ್ಯಾದಿ ವಿವರ ನೀಡಿದರು. ಪ್ಲಾಸ್ಟಿಕ್ ಬಳಕೆಯ ಅಪಾಯಗಳು, ಅದನ್ನು ಎಸೆಯುವುದರಿಂದ, ಹೂಳುವುದು ಮತ್ತು ಸುಡುವುದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಮಾಹಿತಿ ನೀಡಿ ಅದರ ಬಳಕೆಯನ್ನು ತಗ್ಗಿಸುವ ಮತ್ತು ವಿಲೇವಾರಿಯ ಕ್ರಮಗಳನ್ನು ವಿವರಿಸಿದರು. ಸಂಜೀವ ಖಾರ್ವಿ, ವಿಜಯ ಕ್ರಾಸ್ತಾ, ಗುರುರಾಜ್ ಎತ್ತಿದ ಸಂಶಯಗಳಿಗೆ ಸೂಕ್ತ ಪರಿಹಾರ ಸೂಚಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ. ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಅಧಿಕಾರಿ ಹರಿಶ್ಚಂದ್ರ ಆಚಾರ್ ಸ್ವಾಗತಿಸಿ, ವಂದಿಸಿದರು. ಕರ ಸಂಗ್ರಾಹಕ ಶೇಖರ್ ಮರವಂತೆ ನಿರೂಪಿಸಿದರು. ಉಪಾಧ್ಯಕ್ಷ ಗಣೇಶ ಪೂಜಾರಿ, ಸದಸ್ಯರು, ಗ್ರಾಮಸ್ಥರು ಇದ್ದರು.

Exit mobile version