Kundapra.com ಕುಂದಾಪ್ರ ಡಾಟ್ ಕಾಂ

ದೇಶದಲ್ಲಿ ಏಕರೂಪ ಮೀನುಗಾರಿಕಾ ನೀತಿಯಿಂದ ಸಮಸ್ಯೆ ಪರಿಹಾರ: ಶಾಸಕ ಗೋಪಾಲ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೀನು ಕ್ಷಾಮದಿಂದ ಮೀನುಗಾರಿಕಾ ವೃತ್ತ್ತಿ ಮಾಡುತ್ತಿರುವವರು ಸಂಕಷ್ಟಕ್ಕೆ ಸಿಲುಕಿದ್ದು, ಮೀನಿನ ಮರಿ-ಮೊಟ್ಟೆಗಳ ಸಂತತಿ ನಾಶ, ಮೀನುಗಾರಿಕಾ ನೀತಿ ಕಟ್ಟುನಿಟ್ಟಾಗಿ ಅನುಸರಿಸದೇ ಇರುವುದು ಮೀನು ಕ್ಷಾಮಕ್ಕೆ ಕಾರಣ. ಮೀನುಗಾರರು ಸರ್ಕಾರದ ನಿಯಮ ಸ್ಪಷ್ಟ ಪಾಲಿಸಬೇಕು. ದೇಶದಲ್ಲಿ ಏಕರೂಪ ಮೀನುಗಾರಿಕಾ ನೀತಿಯಿಂದ ಸಮಸ್ಯೆ ಪರಿಹಾರ ಸಾಧ್ಯವಿದ್ದು, ಒಂದೇ ನೀತಿ ಜಾರಿಗೆ ಬರಬೇಕು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.

ಅವರು ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಮೀನುಗಾರಿಕಾ ಇಲಾಖೆ ಆಶ್ರಯದಲ್ಲಿ ಕುಂದಾಪುರ ಡಾ. ಅಂಬೇಡ್ಕರ್ ಭವನದಲ್ಲಿ ನಡೆದ ಮೀನುಗಾರಿಕಾ ನೀಲಿ ಕ್ರಾಂತಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು.

ದೇಶದಲ್ಲಿ ಒಂದೇ ಮೀನುಗಾರಿಕಾ ನೀತಿ ಅಳವಡಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಅಹವಾಲು ಸಲ್ಲಿಸಿದೆ ಎಂದ ಅವರು, ಮೀನುಗಾರಿಕಾ ಸಮಸ್ಯೆ ಬಗ್ಗೆ ಮುಕ್ತ ಚರ್ಚೆ ನಡೆಸಿ, ಸಮಸ್ಯೆಗಳ ಪರಿಹಾರಕ್ಕೆ ವಿಚಾರ ಸಂಕಿರಣಗಳು ವೇದಿಕೆ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯತು ಸದಸ್ಯರಾದ ಲಕ್ಷ್ಮೀ ಮಂಜು ಬಿಲ್ಲವ, ಶ್ರೀಲತಾ ಸುರೇಶ್ ಶೆಟ್ಟಿ, ಮೀನುಗಾರಿಕಾ ಸಂಕಷ್ಟ ಪರಿಹಾರ ಸಮಿತಿ ಸದಸ್ಯ ಮದನ್ ಕುಮಾರ್, ಬೈಂದೂರು ವಲಯ ನಾಡಾ ದೋಣಿ ಸಂಘ ಅಧ್ಯಕ್ಷ ಮಂಜು ಬಿಲ್ಲವ, ಶಿರೂರು ವಲಯ ನಾಡದೋಣಿ ಸಂಘ ಅಧ್ಯಕ್ಷ ನಾರಾಯಣ ಅಳವೆಗದ್ದೆ, ಹೆಮ್ಮಾಡಿ ಮೀನುಗಾರಿಕಾ ಸೊಸೈಟಿ ಅಧ್ಯಕ್ಷ ಚಂದ್ರ ನಾಯ್ಕ್, ಮಾಜಿ ಜಿಪಂ ಸದಸ್ಯ ಗಣಪತಿ ಶ್ರೀಯಾನ್, ಮಲ್ಪೆ ಮೀನುಗಾರ ಇಲಾಖೆ ಗ್ರೇಡ್-೨ ಸಹಾಯಕ ನಿರ್ದೇಶಕ ಶಿವ ಕುಮಾರ್ ಇದ್ದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಮೀನುಗಾರಿಕಾ ಮನೆ ಹಕ್ಕು ಪತ್ರ ವಿತರಿಸಿದರು. ತ್ರಾಸಿ ಜಿಪಂ. ಸದಸ್ಯ ಶೋಭಾ ಪತ್ರನ್ ಮೀನುಗಾರಿಕಾ ಕೈಪಿಡಿ ಬಿಡುಗಡೆ ಮಾಡಿದರು.

ಜಿಲ್ಲಾ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಪಾರ್ಶ್ವನಾಥ ಸ್ವಾಗತಿಸಿದರು. ಆಶ್ವಿತ ಮತ್ತು ಬಳಗ ಪ್ರಾರ್ಥಿಸಿದರು. ಮೀನುಗಾರಿಕಾ ಇಲಾಖೆ ಗ್ರೇಡ್-೨ ಸಹಾಯಕ ನಿರ್ದೇಶಕಿ ಸವಿತಾ ಖಾರ್ವಿ ನಿರೂಪಿಸಿದರು.

Exit mobile version