ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ಸಮಾಜಕ್ಕಾಗಿ ಬದುಕುವ ದೊಡ್ಡ ಪಡೆ ನಿರ್ಮಾಣವಾಗಿದ್ದು, ಜನರ ರಕ್ಷಣೆ ಮತ್ತು ಕುಂದು ಕೊರತೆಗಳನ್ನು ನೀಗಿಸುವಲ್ಲಿ ಪ್ರ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ದೇಶಕ್ಕೆ ಅನುಕೂಲವಾಗುವಂತಹ ನಿಲುವು ತಳೆದಿರುವ ಸಂಘದ ಪ್ರತಿಯೊಂದು ಕಾರ್ಯವೂ ಜನಾಂದೋಲನವಾಗಿ ರೂಪುಗೊಂಡಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ವಿಭಾಗದ ಕಾರ್ಯಕಾರಿಣಿ ಸದಸ್ಯ ಗಜಾನನ ಪೈ ಹೇಳಿದರು.
ಅವರು ಇಲ್ಲಿನ ಗಾಂಧಿ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪಥಸಂಚಲದ ಬಳಿಕ ಜರುಗಿದ ಸಭೆಯಲ್ಲಿ ಮಾತನಾಡಿದರು. ಸಂಘದ ಪ್ರತಿಯೊಬ್ಬರೂ ತಾನೊಬ್ಬ ವ್ಯಕ್ತಿಯಲ್ಲ ಸಮಷ್ಠಿಯ ಭಾಗ ಎಂದು ಅರಿಯುವುದು ಪಥ ಸಂಚಲನದ ಉದ್ದೇಶವಾಗಿದ್ದು, ಈ ಮೂಲಕ ಜನರಲ್ಲಿ ಸ್ಥೈರ್ಯ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಸಮಾಜ ವೃಕ್ಷಕ್ಕೆ ಬೇರಿನ ರೀತಿಯಲ್ಲಿ ಸಂಘವಿದ್ದು, ಸಂಸ್ಕೃತಿಯ ಸಾರ ಸರ್ವಸ್ವವನ್ನು ಹೀರಿ ಬದುಕಿ ಸಮಾಜಕ್ಕೆ ಮಾದರಿಯಾಗುವುದನ್ನು ಇಲ್ಲಿ ಕಾಣಬಹುದಾಗಿದೆ ಎಂದರು. ದಿನದ ಕನಿಷ್ಠ ಒಂದು ಗಂಟೆಯನ್ನು ಶಾಖೆಗೆ ನೀಡುವ ಮೂಲಕ ಸಮಾಜಕ್ಕಾಗಿ ಬದುಕುವ ಕರ್ತವ್ಯವನ್ನು ಮೈಗೂಡಿಸಿಕೊಂಡಿರುವ ಸ್ವಯಂಸೇವಕರು, ಭಾರತಾಂಭೆಯ ಮಕ್ಕಳು ಸಂಘಟಿತರಾಗಬೇಕು ಎಂಬ ಆಶಯದೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದರು.
ನಿವೃತ್ತ ಯೋಧ, ಲೇಖಕ ಚಂದ್ರಶೇಖರ ನಾವಡ ಬೈಂದೂರು ಅಧ್ಯಕ್ಷತೆ ವಹಿಸಿದ್ದರು. ಬೈಂದೂರಿನ ಮುಖ್ಯರಸ್ತೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನ ನಡೆಯಿತು. ನೂರಾರು ಗಣವೇಷಧಾರಿಗಳ ಪಥಸಂಚಲನ ಮೆರಗು ನೀಡಿತ್ತು.