ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಕಾರ್ಮಿಕರ ಸೇವೆ ಶ್ಲಾಘನೀಯ: ಡಾ. ಸುಬ್ರಹ್ಮಣ್ಯ ಭಟ್
ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಕಾರ್ಮಿಕರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ. ಸಾಮಾಜಿಕ ಸ್ಥಾನ-ಮಾನದ ವಿಚಾರದಲ್ಲಿ ಮೂಲೆಗುಂಪಾಗಿರುವ ಇಂತಹ ಕಾರ್ಮಿಕರನ್ನು ಸಂಘಟಿಸಿ ಮುಖ್ಯವಾಹಿನಿಗೆ ತರುವಲ್ಲಿ ಉಪ್ಪುಂದ ಘಟಕದ ಆರಂಭ ಅರ್ಥಪೂರ್ಣ ಎಂದು ತಾಲೂಕು ಕಸಾಪ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಹೇಳಿದರು.
ಬೈಂದೂರು ರೋಟರಿ ಸಭಾಭವನದಲ್ಲಿ ಕರ್ನಾಟಕ ಕಾರ್ಮಿಕರ ವೇದಿಕೆ ಉಪ್ಪುಂದ ಘಟಕ ಉದ್ಘಾಟಿಸಿ, ನೂತನ ಪದಾಧಿಕಾರಿಗಳಿಗೆ ಪದಪ್ರದಾನಿಸಿ ಮಾತನಾಡಿದರು. ಕಾರ್ಮಿಕ ಸಂಘಟನೆಯ ಧ್ಯೇಯೋದ್ಧೇಶಗಳನ್ನು ಅರ್ಥೈಸಿಕೊಂಡು ಅದಕ್ಕೆ ಚ್ಯುತಿ ಬಾರದಂತೆ ಒಗ್ಗಟ್ಟಿನಿಂದ ಸಮಾಜ ಸೇವೆ ಮಾಡಲು ಇದೊಂದು ಉತ್ತಮ ವೇದಿಕೆಯಾಗಿದ್ದು, ಸಂಸಾರದ ಶ್ರೇಯಸ್ಸಿಗಾಗಿ ಯಾವುದೇ ದುಶ್ಚಟಗಳ ದಾಸರಾಗದೇ ನ್ಯಾಯ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ದುಡಿದು ಉದ್ದೇಶ ಈಡೇರಿಸಿಕೊಳ್ಳಬೇಕು. ಜಾತಿ, ಧರ್ಮ, ಭೇಧಭಾವವಿಲ್ಲದೇ, ರಾಜಕೀಯ ಪಕ್ಷಗಳ ಹಾಗೂ ರಾಜಕಾರಣಿಗಳ ಗುಲಾಮರಾಗದೇ ಸ್ವತಂತ್ರವಾಗಿ ಬಾಳುವ ಮೂಲಕ ಕಾರ್ಮಿಕರು ದೇಶದ ಬೆನ್ನೆಲಬು ಎಂಬುದನ್ನು ನಿರೂಪಿಸಬೇಕು. ಸರಿಯಾದ ಮಾರ್ಗದರ್ಶನವಿಲ್ಲದೇ ಯುವಪೀಳಿಗೆ ದಾರಿ ತಪ್ಪುತ್ತಿದ್ದು, ಅವರನ್ನು ಸರಿ ದಾರಿಗೆ ತರುವಲ್ಲಿ ವೇದಿಕೆಯು ತಳಮಟ್ಟದಿಂದ ಬದಲಾವಣೆಗೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ್ಪುಂದ ಘಟಕದ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಶಾಸ್ತ್ರಿ ಬನ್ನಂಜೆ, ಗೌರವಾಧ್ಯಕ್ಷೆ ಚಂದ್ರಿಕಾ ಎಸ್. ಶೆಟ್ಟಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸರಿತಾ, ತಾಪಂ ಸದಸ್ಯ ಜಗದೀಶ ಪೂಜಾರಿ ಹಕ್ಕಾಡಿ, ವಿವಿಧ ಘಟಕಗಳ ಪದಾಧಿಕಾರಿಗಳಾದ ಅಬ್ದುಲ್ ವಹಾಬ್, ರವಿಚಂದ್ರ ನಂದನವನ, ಮಣಿಕಂಠ ಆಚಾರ್, ಪ್ರಕಾಶ ಉಪ್ಪುಂದ, ಸಂತೋಷ್ ಶೆಟ್ಟಿ, ಪ್ರದೀಪ ದೇವಾಡಿಗ, ರಾಜೇಶ ಕಿಣಿ, ಚರಣ್‌ದಾಸ್, ರಾಜು ಬೈಂದೂರು ಮತ್ತಿತರರು ಉಪಸ್ಥಿತರಿದ್ದರು. ರಾಘವೇಂದ್ರ ಬವಳಾಡಿ ನಿರೂಪಿಸಿ, ವಂದಿಸಿದರು.