Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ. ಭಾವೈಕ್ಯದಿಂದ ರಾಜ್ಯದ ಅಭಿವೃದ್ಧಿಯಲ್ಲಿ ಜೊತೆಯಾಗೋಣ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯದಲ್ಲಿ ಕನ್ನಡ ಭಾಷೆಗೆ ಆಗ್ರಪಟ್ಟ ಎನ್ನುವ ನಿಟ್ಟಿನಲ್ಲಿ ಆಡಳಿತದಲ್ಲಿ ಶೇ.೧೦೦ರಷ್ಟು ಕನ್ನಡ ಬಳಕೆಗೆ ಒತ್ತು ಕೊಡಲಾಗಿದೆ. ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕ್ಷೀರ ಭಾಗ್ಯ, ಬಿಸಿಯೂಟ, ಸಮವಸ್ತ್ರದ ಮೂಲಕ ಕನ್ನಡ ಕಲಿಕೆ ಪ್ರಮಾಣ ಹೆಚ್ಚಿಸುವ ಕೆಲಸ ರಾಜ್ಯ ಸರ್ಕಾರ ಮಾಡಿದೆ. ಇಂಗ್ಲಿಷ್ ಎಂಬ ಭ್ರಮೆಯಲ್ಲಿ ಕನ್ನಡ ಕಲಿಕೆಗೆ ಹಿಂದೇಟು ಬೇಡ. ಎಂಟು ಜ್ಞಾನ ಪೀಠ ಮುಡಿಗೇರಿಸಿಕೊಂಡ ಗಟ್ಟಿಭಾಷೆ ಕನ್ನಡ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಸಿ.ಟಿ ಹೇಳಿದರು.

ಅವರು ಕುಂದಾಪುರ ತಾಲೂಕು ಆಡಳಿತ, ಕುಂದಾಪುರ ತಾಪಂ ಹಾಗೂ ಪುರಸಭೆ ಆಶ್ರಯದಲ್ಲಿ ಗಾಂಧಿ ಮೈದಾನದಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ದ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿ ದೇಶಕ್ಕೆ ಕನ್ನಡಿಗರ ಕೊಡುಗೆ ದೊಡ್ಡದಿದ್ದು, ಸ್ವಾತಂತ್ರ ಹೋರಾಟದಲ್ಲೂ ಕನ್ನಡರ ಕೊಡಗೆ ಅನನ್ಯ ಎಂದ ಅವರು, ಎಲ್ಲರೂ ಒಟ್ಟಾಗಿ ಭಾವೈಕ್ಯದಿಂದ ರಾಜ್ಯದ ಅಭಿವೃದ್ಧಿಗೆ ಬದ್ದರಾಗೋಣ. ಕನ್ನಡ ಭಾಷೆ, ಸಾಹಿತ್ಯಕ್ಕೆ ಸಾಹಿತಿಗಳು ದೊಡ್ಡ ಕೊಡುಗೆ ನೀಡಿದ್ದು, ಕನ್ನಡ ಭಾಷೆ ಶ್ರೀಮಂತಗೊಳಿಸಿದರು ಎಂದು ಹೇಳಿದರು.

ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಶ್ರೀ ಸುಧಾಕರ ಮೊಗವೀರ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಷ್ಟ್ರೀಯ ಅಥವಾ ಪ್ರಾದೇಶಿಕ ಹಬ್ಬಗಳು ಕೇವಲ ಮನೆಯಲ್ಲಿ ಆಚರಿಸುವ ಹಬ್ಬಗಳಂತಾಗದೆ ವರ್ಷಪೂರ್ತಿ ಅಚರಣೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಭಾಷೆ ಬದುಕಾಗಬೇಕು. ಮೊದಲು ಮಾತೃಭಾಷೆ ನಂತರ ಬೇರೆ ಭಾಷೆಯಾಗಿದ್ದು, ಇಂಗ್ಲಿಷ್ ಇರಲಿ ಕನ್ನಡಕ್ಕೆ ಮೊದಲ ಆಧ್ಯತೆ ಸಲ್ಲಲಿ. ಭಾವನೆಗಳ ವ್ಯಕ್ತ ಪಡಿಸಲು ಮಾತೃಭಾಷೆಯಷ್ಟು ಮತ್ತಾವ ಭಾಷೆಯೂ ಅಷ್ಟು ಸೂಕ್ತವಾಗೋದಿಲ್ಲ.

ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ, ಉಪಾಧ್ಯಕ್ಷ ರಾಜೇಶ್ ಕಾವೇರಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಕಾಸ್ ಹೆಗ್ಡೆ, ಪುರಸಭೆ ಸದಸ್ಯರಾದ ಪುಷ್ಟಾ ಶೇಟ್, ಶಕುಂತಲಾ ಗುಲ್ವಾಡಿ, ಪುರಸಭೆ ಮಾಜಿ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಕುಂದಾಪುರ ತಾಪಂ ಇಒ ಡಾ. ನಾಗಭೂಷಣ ಉಡುಪ, ಡಿಎಸ್ಪಿ ಪ್ರವೀಣ್ ಹೆಚ್.ನಾಯ್ಕ್, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ ಇದ್ದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಜಿ.ಎಂ.ಬೋರ್ಕರ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ವಂದಿಸಿದರು. ಕುಂದಾಪುರ ಠಾಣೆ ಎಸೈ ಹರೀಶ್ ನೇತೃತ್ವದಲ್ಲಿ ಪೊಲೀಸ್, ಅಗ್ನಶಾಮಕ ದಳ, ವಿವಿಧ ಶಾಲೆಗಳ ಎನ್‌ಸಿಸಿ, ಸೇವಾದಳ, ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳಿಂದ ಅಕರ್ಷಕ ಪಥ ಸಂಚಲನ, ಕುಂದಾಪುರ ಬಿ.ಆರ್.ರಾಯರ ಹಿಂದೂ ಹಿರಿಯ ಪ್ರಾಥಮಿಕ ಶಾಲೆ, ಹೆಚ್‌ಎಂಎಂ ಆಂಗ್ಲಾ ಮಾಧ್ಯಮ ಶಾಲೆ, ಶ್ರೀ ವೆಂಕಟರಮಣ ಆಂಗ್ಲಾ ಮಾಧ್ಯಮ ಶಾಲೆ, ಹೋಲಿ ರೋಜರಿ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ‍್ಯಕ್ರಮ ನಡೆಸಿಕೊಟ್ಟರು.

Exit mobile version