Kundapra.com ಕುಂದಾಪ್ರ ಡಾಟ್ ಕಾಂ

ಸಮುದಾಯದ ಸಹಭಾಗಿತ್ವದಿಂದ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ: ಡಿವೈಎಸ್ಪಿ ದಿನಕರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಾಮರ್ಥ್ಯವಿದ್ದರೆ ಭ್ರಷ್ಟಾಚಾರಕ್ಕೆ ಅವಕಾಶವಿರುವುದಿಲ್ಲ. ವಿದ್ಯಾರ್ಥಿ ದೆಸೆಯಿಂದಲೇ ಇದನ್ನು ಮೈಗೂಡಿಸಿಕೊಂಡರೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ. ಸಮಾಜ ಭ್ರಷ್ಟಾಚಾರದಿಂದ ಕೂಡಿದೆ ಎಂದು ದೂಷಿಸುವ ಮೊದಲು ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ತಮ್ಮ ತಮ್ಮ ಕೊಡುಗೆ ಅಗತ್ಯ ಇದೆ ಎಂದು ಉಡುಪಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಉಪಾಧೀಕ್ಷಕ ದಿನಕರ ಶೆಟ್ಟಿ ಹೇಳಿದರು.

ಅವರು ರೋಟರಿ ಕ್ಲಬ್ ಬೈಂದೂರು, ಉಡುಪಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಉಡುಪಿ, ಸರಕಾರಿ ಪದವಿಪೂರ್ವ ಕಾಲೇಜು ಬೈಂದೂರು ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಜರುಗಿದ ’ನನ್ನ ನೋಟ ಭ್ರಷ್ಟಾಚಾರ ಮುಕ್ತ ಭಾರತದತ್ತ’ ಭೃಷ್ಟಾಚಾರ ಜಾಗೃತಿ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಕಾನೂನುಬದ್ಧ ಹಾಗೂ ನ್ಯಾಯಬದ್ಧವಾಗಿ ಸರಕಾರಿ ನೌಕರರು ಪಡೆಯುವ ಸಂಬಳದ ಹೊರತಾಗಿ ಬೇರೆ ಯಾವುದೇ ಸ್ವರೂಪದಲ್ಲಿ ಗಳಿಸುವ ಪ್ರತಿಯೊಂದೂ ಭ್ರಷ್ಟಾಚಾರದ ಭಾಗವೇ ಆಗಿದೆ. ಭ್ರಷ್ಟಾಚಾರದಿಂದ ಜನಸಾಮಾನ್ಯರಿಗೆ ಅನ್ಯಾಯವಾದರೆ ಅದನ್ನು ವಿರೋಧಿಸುವ, ಪ್ರತಿಭಟಿಸುವ ಮನೋಭಾವ ನಮ್ಮಲ್ಲಿ ಇರದಿದ್ದರೆ, ಶಪಿಸುವುದನ್ನು ಬಿಟ್ಟು ಭ್ರಷ್ಟಾಚಾರ ತೊಲಗಿಸಲು ಕ್ರಮ ಕೈಗೊಳ್ಳದೇ ಹೋದರೆ ಅದರ ನಿರ್ಮೂಲನೆ ಸಾಧ್ಯವಿಲ್ಲ ಎಂದರು.

ಭ್ರಷ್ಟಾಚಾರ ನಿಗ್ರಹದಳ ಸಂಸ್ಥೆಯು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು ನಿಮ್ಮ ನಿಮ್ಮ ಊರುಗಳಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳು ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಸಾರ್ವಜನಿಕರು ಹಿಂಜರಿಯದೇ ಮಾಡಬೇಕಿದೆ. ಮಾಹಿತಿ ನೀಡುವ ವ್ಯಕ್ತಿಯ ಗೌಪ್ಯತೆಯನ್ನು ಕಾಪಾಡುವುದು ಹಾಗೂ ಅವರಿಗೆ ರಕ್ಷಣೆ ನೀಡುವುದಕ್ಕೂ ಎಸಿಬಿ ಸಂಸ್ಥೆ ಕಠಿಬದ್ಧವಾಗಿದೆ ಎಂದರು.

ಪೊಲೀಸ್ ನಿರೀಕ್ಷಕರಾದ ಸತೀಶ್ ಬಿ.ಎಸ್ ಅವರು ಮಾತನಾಡಿ ಪ್ರಾಮಾಣಿಕತೆ ಹಾಗೂ ಶಿಸ್ತನ್ನು ವಿದ್ಯಾರ್ಥಿ ದೆಸೆಯಿಂದಲೇ ಮೈಗೂಡಿಸಿಕೊಂಡರೆ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲಿದೆ. ಜನರು ಪ್ರಾಮಾಣಿಕರನ್ನು ಯಾವಾಗಲೂ ಮೆಚ್ಚುತ್ತಾರೆ. ಆದರೆ ಒಮ್ಮೆ ಭ್ರಷ್ಟರೆಂಬ ಪಟ್ಟ ಸಿಕ್ಕರೆ ಜನರು ಅವರನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ ಎಂದರು.

ಬೈಂದೂರು ರೋಟರಿ ಅಧ್ಯಕ್ಷ ಹುಂಚನಿ ಕೃಷ್ಣಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಸ.ಪ.ಪೂ ಕಾಲೇಜಿನ ಪ್ರಾಂಶುಪಾಲ ಟಿ. ಪಾಲಾಕ್ಷ, ಉಪಪ್ರಾಂಶುಪಾಲೆ ಜ್ಯೋತಿ ಶ್ರೀನಿವಾಸ್, ರೋಟರಿ ಬೈಂದೂರು ನಿಕಟಪೂರ್ವಾಧ್ಯಕ್ಷ ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು. ವಿದಾರ್ಥಿಗಳಾದ ಮನೀಶ್, ಪ್ರೇಕ್ಷಾ, ಶರತ್ ಹಾಗೂ ರಂಜಿತ್ ಕುಮಾರ್ ಭ್ರಷ್ಟಾಚಾರ ಮುಕ್ತ ಭಾರತ ವಿಷಯದ ಕುರಿತು ಮಾತನಾಡಿದರು. ರೋಟೆರಿಯನ್ ವೆಂಕಟೇಶ್ ಕಾರಂತ್ ಸ್ವಾಗತಿಸಿ, ರೋಟರಿ ಕಾರ್ಯದರ್ಶಿ ಡಾ. ಪ್ರವೀಣ್ ಶೆಟ್ಟಿ ವಂದಿಸಿದರು. ರೋಟೆರಿಯನ್ ಗೋವಿಂದ ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು.

Exit mobile version