ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಂದು ಯಕ್ಷಗಾನ ವೃತ್ತಿ ಮೇಳಗಳಲ್ಲಿ ಸಮರ್ಥ ಯುವ ಕಲಾವಿದರ ಕೊರತೆ ಇದೆ. ಯಕ್ಷಗಾನ ಕಲಾಕೇಂದ್ರಗಳು ಮಕ್ಕಳಿಗೆ ತರಬೇತಿ ನೀಡಿ ಅವರನ್ನು ಭವಿಷ್ಯದ ಉತ್ತಮ ಕಲಾವಿದರನ್ನಾಗಿ ರೂಪಿಸುವ ಮೂಲಕ ಈ ಕೊರತೆಯನ್ನು ನೀಗಬೇಕು ಎಂದು ಉದ್ಯಮಿ, ಕೋಟ ಅಮೃತೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಆನಂದ ಸಿ. ಕುಂದರ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹೇರಂಜಾಲು ಯಕ್ಷಗಾನ ಪ್ರತಿಷ್ಠಾನ ನಾಗೂರಿನ ಗುಂಜಾನುಗುಡ್ಡೆಯ ಮಾರ್ವಿ ರಾಮಕೃಷ್ಣ ಹೆಬ್ಬಾರ್ ರಂಗಮಂದಿರದಲ್ಲಿ ನಡೆಸಿದ ದಿ. ವೆಂಕಟರಮಣ ಗಾಣಿಗ ನೆನಪಿನೋಕುಳಿ ಯಕ್ಷಗಾನ ದಶಮಿ ಕಾರ್ಯಕ್ರಮದ ಭಾನುವಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಯಕ್ಷಗಾನಕ್ಕೆ ಹೇರಂಜಾಲು ವೆಂಕಟರಮಣ ಗಾಣಿಗ ಮತ್ತು ಮಾರ್ವಿ ರಾಮಕೃಷ್ಣ ಹೆಬ್ಬಾರ್ ಅವರ ಕೊಡುಗೆ ಅನನ್ಯವಾದುದು. ಅವರ ಹೆಸರಿನಲ್ಲಿ ಈ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ವಿತರಿಸುತ್ತಿರುವುದು ಪ್ರಶಂಸನೀಯ ಕಾರ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಗೋಪಾಲ ಪೂಜಾರಿ ಹೇರಂಜಾಲು ಯಕ್ಷಗಾನ ಪ್ರತಿಷ್ಠಾನದ ಕಾರ್ಯಕ್ರಮಗಳಿಗೆ, ಯಕ್ಷಗಾನ ಶಾಲೆಗೆ ಸರ್ಕಾರದ ಅನುದಾನ ದೊರಕಿಸಲು ಶ್ರಮಿಸುವ ಭರವಸೆಯಿತ್ತರು. ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀನಿವಾಸ ಸ್ವಾಗತಿಸಿದರು. ಅಧ್ಯಕ್ಷ ಎಚ್. ಗೋಪಾಲ ಗಾಣಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಸುಬ್ರಹ್ಮಣ್ಯ ನಾವಡ ವಂದಿಸಿದರು. ಈಶ್ವರ ದೇವಾಡಿಗ ನಿರೂಪಿಸಿದರು.
ನಿವೃತ್ತ ಕಲಾವಿದ ಕೊಪ್ಪಾಟೆ ಮುತ್ತ ಗೌಡ ಅವರಿಗೆ ಹೇರಂಜಾಲು ವೆಂಕಟರಮಣ ಗಾಣಿಗ ಪ್ರಶಸ್ತಿ ಮತ್ತು ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಎಚ್. ಶ್ರೀಧರ ಹಂದೆ ಅವರಿಗೆ ಮಾರ್ವಿ ರಾಮಕೃಷ್ಣ ಹೆಬ್ಬಾರ್ ಮತ್ತು ರತ್ನಾಕರ ಹೆಬ್ಬಾರ್ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅರಣ್ಯಾಧಿಕಾರಿ ಆಲೂರು ರಘುರಾಮ ದೇವಾಡಿಗ, ಪ್ರಸಂಗಕರ್ತ ಬಸವರಾಜ ಶೆಟ್ಟಿಗಾರ್, ಬೋಳಂಬಳ್ಳಿ ಪಾರ್ಶ್ವನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ಬಸದಿಯ ಧರ್ಮದರ್ಶಿ ಪದ್ಮರಾಜ ಜೈನ್, ಹವ್ಯಾಸಿ ಯಕ್ಷಗಾನ ಕಲಾವಿದ ದಿನೇಶ್ ಉಪ್ಪೂರ, ಹಿರಿಯ ಯಕ್ಷಗಾನ ಕಲಾವಿದ, ಗುರು ಹೇರಂಜಾಲು ಸುಬ್ಬಣ್ಣ ಗಾಣಿಗ, ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಇದ್ದರು. ಆಯ್ದ ಹಿರಿಯ ಕಲಾವಿದರಿಂದ ’ಕೃಷ್ಣಾರ್ಜುನ ಕಾಳಗ’ ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಿತು.