Site icon Kundapra.com ಕುಂದಾಪ್ರ ಡಾಟ್ ಕಾಂ

ಸ್ವಸ್ಥ ಸಮಾಜಕ್ಕಾಗಿ ಪ್ರತಿ ವಿದ್ಯಾರ್ಥಿಯೂ ಶ್ರಮಿಸಬೇಕು: ಡಿವೈಎಸ್ಪಿ

ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ

ಕುಂದಾಪುರ: ಹುತಾತ್ಮ ಯೋಧರ ಹೆಸರಿನಲ್ಲಿ ನೀಡುತ್ತಿರುವ ಪ್ರಶಸ್ತಿ ನೀಡುತ್ತಿರುವುದು ಸಮಾಜಕ್ಕೆ ಮಾದರಿಯಾದುದು ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಂ. ಮಂಜುನಾಥ ಶೆಟ್ಟಿ ಹೇಳಿದರು.

ಅವರು ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಭಂಡಾರ್ಕಾರ್ಸ್ ಕಾಲೇಜಿನ 2014-15ನೇ ಸಾಲಿನ ಎನ್‌ಸಿಸಿ ಕೆಡೆಟ್‌ಗಳಾದ ಭರತ್‌ರಾಜ್‌ ಶೆಟ್ಟಿ ಹಾಗೂ ವಿನಯ ಕಾಂಚನ್‌ ಗೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು.

ಸುಭದ್ರ ಸಮಾಜ ನಿರ್ಮಾಣಗೊಂಡರೆ ಎಲ್ಲರೂ ನೆಮ್ಮದಿಯಿಂದ ಬದುಕಬಹುದು. ದೇಶಕ್ಕಾಗಿ ಮರಣವನ್ನಪ್ಪಿದವರ ಆದರ್ಶವನ್ನು ಪಾಲಿಸಿ ಸ್ವಸ್ಥ ಸಮಾಜ ನಿರ್ಮಿಸುವಲ್ಲಿ ಪ್ರತಿ ವಿದ್ಯಾರ್ಥಿಗಳೂ ಶ್ರಮಿಸಬೇಕು. ವೃತ್ತಿ ಯಾವುದೇ ಇರಲಿ ಅದು ಸಮಾಜಮುಖಿಯಾಗಿರಬೇಕು ಎಂದರು.

ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಆಡಳಿತಾಧಿಕಾರಿ ಡಾ. ಎಚ್. ಶಾಂತಾರಾಮ್ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಕಾಲೇಜಿನ ಮಾಜಿ ಪ್ರಾಂಶುಪಾಲರುಗಳಾದ ಪ್ರೊ. ದೋಮ ಚಂದ್ರಶೇಖರ, ಪ್ರೊ. ನಾರಾಯಣ ರಾವ್, ನಿವೃತ್ತ ಪ್ರಾಧ್ಯಾಪಕರುಗಳಾದ ಶಾಂತಾರಾಮ ಉಪಾಧ್ಯ, ಪ್ರೊ. ನಾರಾಯಣ ಸ್ವಾಮಿ, ಗ್ರಂಥಪಾಲಕ ಆನಂದ, ಕಛೇರಿ ಸಿಬ್ಬಂದಿ ಶಿವರಾಮ ಅವರನ್ನು ಸನ್ಮಾನಿಸಲಾಯಿತು. ಬಳಿಕ ಶೈಕ್ಷಣಿಕ ಸಾಧನೆಗೈದ ಕಾಲೇಜಿನ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಭಂಡಾರ್ಸಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ| ಎನ್. ಪಿ. ನಾರಾಯಣ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ಕಾರ್ತಿಕೇಯ ಮಧ್ಯಸ್ಥ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ರಂಜಿತ್ ಕುಮಾರ್ ಶೆಟ್ಟಿ ಧನ್ಯವಾದಗೈದರು. ರಾಘವೇಂದ್ರ ಚರಣ ನವಡ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ವರ್ಧೆ ಹಾಗೂ ಹಳೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Exit mobile version