ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಸಿದ್ಧ ರಂಗಕರ್ಮಿ ಕುಂದಾಪುರ ರೂಪಕಲಾ ಸಂಸ್ಥೆಯ ನಿರ್ದೇಶಕ ಕೆ ಸತೀಶ ಪೈ ಅವರಿಗೆ ಚಿಕ್ಕಮಗಳೂರಿನ ಸಾಂಸ್ಕೃತಿಕ ಸಂಘವು ’ನಟ ಶಿರೋಮಣಿ’ ಬಿರುದು ನೀಡಿ ಗೌರವಿಸಿದೆ.
ಚಿಕ್ಕಮಗಳೂರಿನ ಕುವೆಂಪು ರಂಗಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕೆ.ಸತೀಶ ಪೈ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಿ ಬಿರುದು ನೀಡಿ ಸತ್ಕರಿಸಿ ಮಾತನಾಡಿದ ಚಿಕ್ಕಮಗಳೂರು ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಉಜ್ವಲ್ ಡಿ.ಪಡುಬಿದ್ರಿ, ಕಳೆದ ೪೦ ವರ್ಷಗಳಿಂದ ರಂಗಭೂಮಿಯಲ್ಲಿ ವಿವಿಧ ನಾಟಕಗಳನ್ನು ಪ್ರದರ್ಶಿಸಿ ಜನರ ಮನ್ನಣೆಗೆ ಪಾತ್ರವಾಗಿರುವ ಕುಂದಾಪುರದ ರೂಪಕಲಾ ಸಂಸ್ಥೆ ಇಂದು ವಿದೇಶಗಳಲ್ಲಿ ನಾಟಕ ಪ್ರದರ್ಶನಗಳನ್ನು ನೀಡುತ್ತಿದೆ. ನಶಿಸಿ ಹೋಗುತ್ತಿರುವ ನಾಟಕ ಕಲೆಯನ್ನು ಉಳಿಸಿ ಬೆಳೆಸಲು ಕೆ.ಸತೀಶ ಪೈ ನೇತೃತ್ವದ ರೂಪಕಲಾ ಸಂಸ್ಥೆ ಶ್ರಮಿಸುತ್ತಿರುವುದು ಅಭಿನಂದನೀಯ. ಸರ್ಕಾರ ಇಂತಹ ಕಲಾವಿದರ ಸೇವೆಯನ್ನು ಗುರುತಿಸಿ ಗೌರವಿಸುವುದರ ಜೊತೆಗೆ ಈ ಕಲೆಯನ್ನು ಉಳಿಸಿ ಬೆಳೆಸಲು ಪ್ರೋತ್ಸಾಹ ನೀಡಬೇಕಿದೆ ಎಂದರು.
ಸಂಘದ ಗೌರವಾಧ್ಯಕ್ಷ ಆರ್.ಶೇಷಾದ್ರಿ, ಅಧ್ಯಕ್ಷ ಗಿರಿಧರ ಯತೀಶ್ ಎಂ.ಎಸ್., ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಶಂಕರನಾರಾಯಣ ಭಟ್, ರೂಪಕಲಾ ಸಂಸ್ಥೆಯ ಕೆ.ಸಂತೋಷ ಪೈ, ಅಶೋಕ ಶ್ಯಾನುಭಾಗ್, ಬಿ.ಗಣೇಶ ಪ್ರಸಾದ ಶೆಣೈ ಗಂಗೊಳ್ಳಿ, ನಾಗೇಶ ಕಾಮತ್, ನವೀನ್ ಭಟ್ ಹಟ್ಟಿಯಂಗಡಿ, ನರೇಶ ಭಟ್, ಮಣಿಕಾಂತ ಶೆಟ್ಟಿ, ನಾಗೇಶ ಹಾಲಾಡಿ, ಶ್ವೇತಾ ಮತ್ತಿತರರು ಉಪಸ್ಥಿತರಿದ್ದರು.