Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ನ್ಯಾಯಾಲಯದಲ್ಲಿ ಭ್ರಷ್ಟಾಚಾರ ವಿರುದ್ಧ ಜಾಗೃತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಷನ್ ಕುಂದಾಪುರ ಮತ್ತು ಅಭಿಯೋಗ ಇಲಾಖೆ ಕುಂದಾಪುರ ಇವರ ಸಂಯಕ್ತ ಆಶ್ರಯದಲ್ಲಿ ಭ್ರಷ್ಟಾಚಾರ ವಿರುದ್ಧ ಜಾಗೃತಿ ಕಾರ್ಯಕ್ರಮ ಕುಂದಾಪುರ ನ್ಯಾಯಾಲಯದ ಸಂಕೀರ್ಣದಲ್ಲಿ ಜರುಗಿತು.

ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ, ಗೌರವಾನ್ವಿತ ಡಿ.ಪಿ ಕುಮಾರ ಸ್ವಾಮಿ ಇವರು ಕಾರ್ಯಕ್ರಮವನ್ನು ಉದ್ಘಾಟಸಿ, ಭ್ರಷ್ಟಾಚಾರ ಎಂಬ ಮಹಾಪೀಡುಗಿನಲ್ಲಿ ಲಂಚ ಕೊಡುವುದು ಮತ್ತು ತೆಗೆದುಕೊಳ್ಳುವುದು ಮಾತ್ರ ಭ್ರಷ್ಟಾಚಾರವಲ್ಲ. ಭ್ರಷ್ಟಾಚಾರವನ್ನು ನೋಡಿ ಸುಮ್ಮನಿರುವುದು ಕೂಡಾ ಅತೀ ದೊಡ್ಡ ಭ್ರಷ್ಟಾಚಾರ. ಭ್ರಷ್ಟಾಚಾರದ ವಿರುದ್ಧದ ದ್ಯೇಯೋದ್ದೇಶಗಳನ್ನು ಪಾಲನೆ ಮಾಡಿಕೊಂಡು ಬರುವುದು ಇಂದಿನ ಯುವ ಸಮುದಾಯದ ಅಗತ್ಯದ ಕರ್ತವ್ಯ ಪಾಲನೆಗಳಲ್ಲಿ ಒಂದಾಗಿದೆ ಎಂದರು.

ಕುಂದಾಪುರ ಬಾರ್ ಅಸೋಸಿಯೇಷನ್ ಕುಂದಾಪುರ ಇದರ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ, ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ದೇಶದ ಜನರಿಗೆ ದಿನ ಬೆಳಗಾದರೆ ಭ್ರಷ್ಟಾಚಾರದ ಬಗ್ಗೆ ಕೇಳಿ ಕೇಳಿ ಸಾಕಾಗಿದೆ, ಭ್ರಷ್ಟಾಚಾರ ಎನ್ನುವ ಪಿಡುಗು ಇಂದು ನಿನ್ನೆಯದ್ದಲ್ಲ ಸಮಾಜ ಹುಟ್ಟಿದಂದಿನಿಂದ ಬೆಳೆದುಕೊಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರದ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಜನರು ಮನಸ್ಸು ಮಾಡಿದರೆ ಮಾತ್ರ ಸಾಧ್ಯ ಎಂದರು.

ಸಂಪನ್ಮೂಲ ವ್ಯಕ್ತಿ ಮತ್ತು ಹಿರಿಯ ನ್ಯಾಯವಾದಿ ಶ್ಯಾಮಲ ಭಂಡಾರಿ ಮಾತನಾಡಿ ಯಾವುದೇ ವ್ಯಕ್ತಿ ನಿಯಮ ಬಾಹಿರವಾಗಿ ತನಗೆ ನ್ಯಾಯಬದ್ಧವಾಗಿ ಸಲ್ಲಬೇಕಾಗಿದ್ದಕ್ಕಿಂತ ಹೆಚ್ಚಿನ ಹಣ ಯಾ ವಸ್ತು ಯಾ ಸೌಲಭ್ಯ ಅಥವಾ ಲಾಭವನ್ನು ಪಡೆಯುವುದನ್ನು ಭ್ರಷ್ಟಾಚಾರ ಎಂದು ಕರೆಯಲಾಗುತ್ತದೆ, ಭ್ರಷ್ಟಾಚಾರದ ವಿರುದ್ಧ ದೂರನ್ನು ನೀಡಿ ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಅದೇ ರೀತಿ ಸುಳ್ಳು ದೂರನ್ನು ನೀಡುವವರ ವಿರುದ್ಧ ಕೂಡಾ ಕ್ರಮಕೈಗೊಳ್ಳಬೇಕಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಕುಂದಾಪುರ ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಮತ್ತು ಪ್ರಧಾನ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ, ಲಾವಣ್ಯ ಎಚ್. ಎನ್. ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ, ಪ್ರವೀಣ್ ನಾಯಕ್, ೨ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ ಚಂದ್ರಶೇಖರ ಬಣಕಾರ್, ಕುಂದಾಪುರದ ಸಹಾಯಕ ಸರಕಾರಿ ಅಭಿಯೋಜಕರಾದ ಶ್ರೀಮತಿ ಸುಮಂಗಲಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ಕುಂದಾಪುರ ಬಾರ್ ಅಸೋಸಿಯೇಷನ್ ಕುಂದಾಪುರ ಇದರ ಸದಸ್ಯರಾದ, ಧನಂಜಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಎಚ್. ರವೀಶ್ಚಂದ್ರ ಶೆಟ್ಟಿ ಇವರು ವಂದಿಸಿದರು.

Exit mobile version