Kundapra.com ಕುಂದಾಪ್ರ ಡಾಟ್ ಕಾಂ

ಚಂದದಿ ಜರುಗಿತು ಚುಕ್ಕಿ ಚಂದ್ರಮ

ಕುಂದಾಪುರ: ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಮತ್ತು ಕುತೂಹಲ ಬೆಳೆಸಿಕೊಳ್ಳಬೇಕು. ಇವತ್ತು ವಿಜ್ಞಾನದ ಬಗ್ಗೆ ಕುತೂಹಲಗಳನ್ನು ಬಗೆಹರಿಸಿಕೊಳ್ಳಲು ಸಾಕಷ್ಟು ಅವಕಾಶಗಳು ಇರುವುದರಿಂದ ತಿಳಿದುಕೊಳ್ಳುವ ವೈಚಾರಿಕ ಮನೋಭಾವನ್ನು ರೂಢಿಸಿಕೊಳ್ಳಬೇಕು ಎಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಎ.ಪಿ ಭಟ್ ಹೇಳಿದರು.

ಕುಂದಾಪುರದ ಸಮುದಾಯ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಉಡುಪಿ ಜಿಲ್ಲಾ ಘಟಕದ ಸಹಯೋಗದೊಂದಿಗೆ ಕುಂದಾಪುರದ ಭಂಡಾರ್ಕಾಸ್ ಕಾಲೇಜಿನಲ್ಲಿ ಆಯೋಜಿಸಲಾದ ಚುಕ್ಕಿ ಚಂದ್ರಮ ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕುಂದಾಪುರ ಸಮುದಾಯದ ಅಧ್ಯಕ್ಷ ಉದಯ ಗಾಂವ್ಕರ್ ಮಾತನಾಡಿ, ಅನುಮಾನ, ಪ್ರಶ್ನೆಗಳಿಂದ ವಿಜ್ಞಾನ ವಿಕಾಸಹೊಂದುತ್ತದೆ. ಜ್ಯೋತಿಷ್ಯದ ಮೂಲಕ ಹೆದರಿಸುವ ಪ್ರವೃತ್ತಿ ಇಂದು ಬೆಳೆಯುತ್ತಿದೆ. ಈ ಸಂದರ್ಭದಲ್ಲಿ ನಾವು ಪ್ರಗತಿಪರ ಆಲೋಚನೆಗಳನ್ನು ಮಾಡುವ ಮೂಲಕ ಕೌತುಕವನ್ನು ವಿಜ್ಞಾನದ ಮೂಲಕ ಪರಿಹರಿಸಿಕೊಳ್ಳಬೇಕು. ನಂಬಿಕೆಗಳಿಗೆ ಪುರಾವೆ ಬೇಡ ಆದರೆ ಜ್ಞಾನಕ್ಕೆ ಸೂಕ್ತ ಪುರಾವೆ ಬೇಕು. ಆ ನಿಟ್ಟಿನಲ್ಲಿ ಪ್ರಗತಿಪರ ಆಲೋಚನೆಗಳಿಗೆ ಅವಕಾಶ ಮಾಡಿಕೊಡುವುದು ಈ ಕಾರ್ಯಕ್ರಮ ಎಂದರು.
ಕರಾವಿಪನ ದಿನೇಶ ಶೆಟ್ಟಿಗಾರ್, ಭಂಡಾರ್ಕಾಸ್ ಕಾಲೇಜಿನ ಭೌತಶಾಸ್ತ್ರ ವಿಭಾಗದ ಕವಿತಾ ದೇವಿ ಶುಭ ಹಾರೈಸಿದರು. ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಗಣಿತ ಉಪನ್ಯಾಸಕ ಕಿಶೋರ ಹಂದೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಸಮುದಾಯದ ಸದಾನಂದ ಬೈಂದೂರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಪ್ರಾತ್ಯಕ್ಷಿಕೆ, ಸಂವಾದ, ಆಕಾಶ ಕಾಯಗಳ ವೀಕ್ಷಣೆ ನಡೆಯಿತು.

Exit mobile version