ಉತ್ತಮ ಕಥೆಯ ಸಿನೆಮಾ ಮಾತ್ರ ಬದುಕಿಗೆ ಹತ್ತಿರವಾಗುತ್ತೆ,: ರಾಜ್ ಬಿ. ಶೆಟ್ಟಿ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕನ್ನಡ ಹಾಗೂ ಹಿಂದಿ ಚಿತ್ರರಂಗದಲ್ಲಿ ಕರಾವಳಿಯ ಹಲವಾರು ಪ್ರತಿಭೆಗಳು ತೊಡಗಿಸಿಕೊಂಡಿದ್ದು, ತಮ್ಮದೇ ಭಿನ್ನ ಶೈಲಿಯ ಮೂಲಕ ಚಿತ್ರರಸಿಕರ ಮನದಲ್ಲಿ ನೆಲೆಯಾಗಿದ್ದಾರೆ. ಸಿನೆಮಾ ರಂಗದಲ್ಲಿ ಶ್ರಮವಹಿಸಿ ಸಾಧನೆಗೈದ ವ್ಯಕ್ತಿಗಳ ಮಾರ್ಗದರ್ಶನ ದೊರೆತರೆ ಸಿನೆಮಾದಲ್ಲಿ ತೊಡಗಿಸಿಕೊಳ್ಳುವವರಿಗೆ ಭವಿಷ್ಯದಲ್ಲಿ ಉತ್ತಮ ದಾರಿಯನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದು ಸಹನ ಗ್ರೂಫ್ಸ್‌ನ ಮಾಲಿಕ ಸುರೇಂದ್ರ ಶೆಟ್ಟಿ ಹೇಳಿದರು.
ಅವರು ಭಾನುವಾರ ಇಲ್ಲಿನ ಸಹನಾ ಕನ್ವೆನ್ಷನ್ ಸೆಂಟರ್‌ನಲ್ಲಿ ಕಾಣಿ ಸ್ಟೂಡಿಯೋ ಆಶ್ರಯದಲ್ಲಿ ಜರುಗಿದ ’ಪಿಚ್ಚರ್ ಡೈರಿಸ್’ ಸಿನೆಮಾ ತಯಾರಿ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಒಂದು ಮೊಟ್ಟೆಯ ಕಥೆ ಸಿನೆಮಾದ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಮಾತನಾಡಿ ಇಂದಿನ ಬಹುತೇಕ ಕಿರುಚಿತ್ರಗಳಿಗೆ ನಿರ್ದಿಷ್ಟವಾದ ಉದ್ದೇಶವೇ ಇರುವುದಿಲ್ಲ. ಹಲವರು ನಿರ್ದೇಶಕರಾಗಬೇಕು ಎಂಬ ಹಂಬಲದಿಂದ ಕಿರುಚಿತ್ರ ಮಾಡುತ್ತಿದ್ದಾರೆ. ಆದರೆ ಕಿರುಚಿತ್ರ ತಯಾರಿಯ ಹಿಂದೆ ಕಥೆಯನ್ನು ಹೇಳಬೇಕು ಎಂಬ ಇಂಗಿತ ಇರಬೇಕು ಎಂದರು. ಸಣ್ಣ ಬಜೆಟ್‌ನಲ್ಲಿ ಚಿತ್ರ ತಯಾರಿಸಿ ಅದರ ಎರಡರಷ್ಟು ಬಜೆಟ್‌ನಲ್ಲಿ ಸೆಲಬ್ರೆಷನ್ ಮಾಡುವುದರಿಂದ ಉತ್ತಮ ಚಿತ್ರವಾಗಲು ಸಾಧ್ಯವಿಲ್ಲ. ನಮ್ಮ ಕೆಲಸ, ಬರವಣಿಗೆ ಹಾಗೂ ಶ್ರದ್ಧೆಯಿಂದ ಮಾತ್ರ ಸಿನೆಮಾ ರಂಗದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿದೆ. ಯಾವುದೇ ಸಿನೆಮಾ ಚನ್ನಾಗಿರಬೇಕು ಎಂದರೆ ಅದರಲ್ಲಿ ಉತ್ತಮ ಕಥೆ ಇರಬೇಕು. ಉತ್ತಮ ಕಥೆ ಮಾತ್ರವೇ ನೋಡುಗನ ಬದುಕಿಗೆ ಹತ್ತಿರವಾಗುತ್ತದೆ. ಬದುಕಿನ ಭಾಗವಾಗಿ ಮತ್ತಷ್ಟು ಚನ್ನಾಗಿ ಬದುಕುವಂತೆ ಪ್ರೆರೇಪಿಸುತ್ತದೆ ಎಂದರು.
ರಾಮ ರಾಮ ರೇ ಸಿನೆಮಾ ನಿರ್ದೇಶಕ ಸತ್ಯಪ್ರಕಾಶ್ ಮಾತನಾಡಿ ಅನುಭವಕ್ಕಾಗಿ ಕಿರುಚಿತ್ರಗಳನ್ನು ಮಾಡಬೇಕು. ಆದರೆ ಇಂದು ಕಿರುಚಿತ್ರಕ್ಕಿಂತ ಅದರ ನಿರ್ದೇಶಕರೇ ವಿಜ್ರಂಭಿಸುತ್ತಿದ್ದಾರೆ. ನಾವು ಮಾತನಾಡುವ ಬದಲಿಗೆ ನಮ್ಮ ಕೆಲಸ ಮಾತನಾಡುವಂತೆ ಮಾಡಿದಾಗ ಮಾತ್ರ ಯಶಸ್ಸಿನ ದಾರಿ ಕಂಡುಕೊಳ್ಳಲು ಸಾಧ್ಯ. ಸಿನೆಮಾವೆಂದರೆ ಕ್ಯಾಮರಾ ಮಾತ್ರವಲ್ಲ. ಪೇಪರ್ ಹಾಗೂ ಪೆನ್ನಿನಿಂದ ಆಗೋದು. ಅದಕ್ಕೆ ಸಾಕಷ್ಟು ತಾಳ್ಮೆ ಅಗತ್ಯವಿದೆ. ಯುಟ್ಯೂಬ್ ನೋಡಿ ಅದರಂತೆ ಸಿನೆಮಾ ಮಾಡಲು ಹೊರಟರೆ ಉತ್ತಮ ಸಿನೆಮಾ ಎಂದೆನಿಸಿಕೊಳ್ಳದು ಎಂದ ಅವರು, ಕಥೆ, ಕ್ಯಾಮರಾದಷ್ಟೇ ಎಡಿಟಿಂಗ್ ಕೂಡ ಬಹುಮುಖ್ಯವಾಗಿದ್ದು, ಅದು ಕಥೆಯನ್ನು ಮತ್ತಷ್ಟು ಸುಂದರವಾಗಿಸುತ್ತದೆ ಎಂದರು.
ರೈಲ್ವೆ ಚಿಲ್ಡ್ರನ್ ಸಿನೆಮಾ ನಿರ್ದೇಶಕ ಪ್ರಥ್ವಿ ಕೊನನೂರು ಸಂವಾದದಲ್ಲಿ ಭಾಗವಹಿಸಿದ್ದರು. ಸೋಮೇಶ್ ಬಂಗೇರ ಸಮನ್ವಯಕಾರರಾಗಿದ್ದರು. ಗುರುನಂದನ್ ಕಾರ್ಯಕ್ರಮ ನಿರೂಪಿಸಿದರು. ಕಾಣಿ ಸ್ಟುಡಿಯೋ ಪ್ರವರ್ತಕರಾದ ಸಂತೋಷ್ ಬಳ್ಕೂರು, ಪ್ರವೀಣ್ ಕುಮಾರ್, ಮನೋಜ್ ಶೆಟ್ಟಿ, ರೇಣುಕಾ ಶರ್ಮಾ, ಐಶ್ವರ್ಯ ಸ್ವುಡಿಯೋದ ರಾಘವೇಂದ್ರ ಬೀಜಾಡಿ ಮೊದಲಾದವರು ಜೊತೆಗಿದ್ದರು.