Kundapra.com ಕುಂದಾಪ್ರ ಡಾಟ್ ಕಾಂ

ಮಂಗಳೂರು ವಿ.ವಿ. ಮಟ್ಟದ ವಿಜ್ಞಾನ ಉತ್ಸವ ಉದ್ಘಾಟನೆ

ಕುಂದಾಪುರ: ನಾಗರಿಕ ಸಮಾಜದ ನಿರ್ಮಾಣದಲ್ಲಿ ಯುವಜನರ ಪಾತ್ರ ಬಹುಮುಖ್ಯ. ಸುಸ್ಥಿರ ಸಮಾಜದ ನಿರ್ಮಾಣದ ಬಗ್ಗೆ ಯುವಜನರನ್ನು ಪ್ರೇರೇಪಿಸುವಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು ಎಂದು ಭಂಡಾರ್ಕಾರ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ| ಕೆ. ಸೋಮಶೇಖರ ಉಡುಪ ಅವರು ಹೇಳಿದರು.

ಅವರು ಇಲ್ಲಿನ ಭಂಡಾರ್ಕಾರ್ ಕಾಲೇಜಿನ ವಿಜ್ಞಾನ ವಿಭಾಗದ ಆಶ್ರಯ ದಲ್ಲಿ ಆಯೋಜಿಸಿದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ವಿಜ್ಞಾನ ಉತ್ಸವ ಸೈಂಟಿಫಿಕಾ-15ನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ವಿದ್ಯಾರ್ಥಿಗಳಲ್ಲಿ ಆಸಕ್ತಿಯ ಕೊರತೆ ಇದ್ದು ಮೆದುಳಿಗೆ ಮೇವು ನೀಡುವಂತಹ ಮತ್ತು ವ್ಯಕ್ತಿತ್ವ ವಿಕಸಿ ಸುವಂತಹ ಕಾರ್ಯಕ್ರಮಗಳ ಆವಶ್ಯಕತೆ ಇದೆ. ಇಂತಹ ಕಾಲೇಜು ಮಟ್ಟದ ಸ್ಪರ್ಧೆಗಳು ಮತ್ತು ಉತ್ಸವಗಳು ವಿದ್ಯಾರ್ಥಿ ಗಳಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಹುಟ್ಟು ಹಾಕುತ್ತವೆ. ವಿದ್ಯಾರ್ಥಿಗಳಲ್ಲಿರುವ ಸೃಜನ ಶೀಲತೆಯನ್ನು ಹೊರಹಾಕುವಲ್ಲಿ ನೆರವಾಗುತ್ತವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಎನ್‌. ಪಿ. ನಾರಾಯಣ ಶೆಟ್ಟಿ ಮಾತನಾಡಿ ಯುವಕರು ಈ ನಾಡಿನ ಸಂಪತ್ತು. ಅವರ ಆಸಕ್ತಿ ಉತ್ಸಾಹಗಳನ್ನು ಪ್ರೇರೇಪಿಸುವ ಕಾರ್ಯಕ್ರಮಗಳ ಆವಶ್ಯಕತೆ ಇದೆ. ಇಂತಹ ಸ್ಪರ್ಧೆಗಳಿಂದ ಯುವಜನರ ಪ್ರತಿಭೆ ಅನಾವರಣಗೊಳ್ಳಲಿ ಎಂದು ಹೇಳಿದರು.

ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ನಾರಾಯಣ ತಂತ್ರಿ ಸ್ವಾಗತಿಸಿ, ವಿದ್ಯಾರ್ಥಿ ಶಂಕರನಾರಾಯಣ ಉಪಾಧ್ಯಾಯ ವಂದಿಸಿದರು. ವಿದ್ಯಾರ್ಥಿನಿ ಫಸವಾ ಆಸ್ನಾ ಕಾರ್ಯಕ್ರಮ ನಿರೂಪಿಸಿದರು.

Exit mobile version