Kundapra.com ಕುಂದಾಪ್ರ ಡಾಟ್ ಕಾಂ

ಅಂದತ್ವ ನಿವಾರಣಾ ಅಭಿಯಾನಕ್ಕೆ ನೇತ್ರದಾನಿಗಳು ಕೈಜೋಡಿಸಬೇಕು: ಡಾ. ರೂಪಶ್ರೀ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೇಹದ ಅತೀ ಮುಖ್ಯ ಅಂಗವಾಗಿರುವ ಕಣ್ಣುಗಳ ಆರೋಗ್ಯದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ನೇತ್ರ ತಪಾಸಣಾ ಶಿಬಿರಗಳು ಸಹಕಾರಿಯಾಗಿದೆ. ದೇಶದಲ್ಲಿ ಲಕ್ಷಾಂತರ ಜನರು ಕಣ್ಣಗಳಿಲ್ಲದೇ ಬದುಕು ಸಾಗಿಸುತ್ತಿದ್ದಾರೆ. ಈ ನೆಲೆಯಲ್ಲಿ ಅಂಧತ್ವ ನಿವಾರಣಾ ಅಭಿಯಾನಕ್ಕೆ ಸ್ವಯಂಪ್ರೇರಿತ ನೇತ್ರದಾನಿಗಳು ಕೈಜೋಡಿಸಬೇಕು ಎಂದು ಕೋಟ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಲಯನ್ಸ್ ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರೂಪಶ್ರೀ ಹೇಳಿದರು.

ದೊಂಬೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಲಯನ್ಸ್ ಕಣ್ಣಿನ ಆಸ್ಪತ್ರೆ, ಲಯನ್ಸ್ ಟ್ರಸ್ಟ್ ಫಾರ್ ಸರ್ವಿಸಸ್ ಮತ್ತು ಚಾರಿಟೀಸ್ ಕೋಟ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಅಂಧತ್ವ ನಿವಾರಣಾ ವಿಭಾಗ, ಉಡುಪಿ ವಿಜಯ್ ಬ್ಯಾಂಕ್ ರಿಟಾಯರ್ಡ್ ಆಫೀಸರ‍್ಸ್ ವೆಲ್‌ಫೇರ್ ಸೋಷಿಯಲ್ ಸೆಂಟರ್, ಮಾರಿಕಾಂಬಾ ಯೂತ್ ಕ್ಲಬ್ ಹವ್ಯಾಸಿ ಕಲಾತಂಡ ಕಳವಾಡಿ-ಬೈಂದೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ವಯಸ್ಸಾದಂತೆ ಕಣ್ಣಿನ ಮಸೂರ ಬೇರೆ ಬೇರೆ ಕಾರಣಗಳಿಂದ ಮಂಜಾಗುತ್ತಾ ಬಂದು ಕ್ರಮೇಣ ಕಣ್ಣಿನ ದೃಷ್ಟಿ ಮಂದವಾಗುತ್ತಾ ಬರುತ್ತದೆ. ಇದನ್ನು ಹೊಲಿಗೆ ರಹಿತ ಅಂತರ್‌ಚಕ್ಷು ಮಸೂರ ಅಳವಡಿಸಿಕೊಳ್ಳುವುದರ ಮೂಲಕ ಗುಣಪಡಿಸಿಕೊಳ್ಳಬಹುದಾಗಿದೆ ಎಂದರು.

ಉಡುಪಿ ಜಿಲ್ಲಾ ವಿಜಯ ಬ್ಯಾಂಕ್ ರಿಟಾಯರ್ಡ್ ಆಫಿಸರ‍್ಸ್ ವೆಲ್‌ಫೇರ್ & ಸೋಷಿಯಲ್ ಸೆಂಟರ್ ಇದರ ಅಧ್ಯಕ್ಷ ಎಚ್.ವಸಂತ ಹೆಗ್ಡೆ ಶಿಬಿರದ ಅಧ್ಯಕ್ಷತೆವಹಿಸಿದ್ದರು. ಮಂಗಳೂರು ಎಸ್‌ಸಿಡಿಸಿಸಿ ಬ್ಯಾಂಕ್ ಉಪಮಹಾಪ್ರಬಂಧಕ ಕೃಷ್ಣ ಬಿಲ್ಲವ ದೊಂಬೆ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿದರು. ಕೋಟ ಲಯನ್ಸ್ ಟ್ರಸ್ಟ್ ಫಾರ್ ಸರ್ವಿಸಸ್ ಚಾರಿಟೀಸ್ ಲಯನ್ಸ್ ಕಣ್ಣಿನ ಆಸ್ಪತ್ರೆಯ ಅಧ್ಯಕ್ಷ ಪಿ. ರಾಜೀವ ಆಳ್ವ, ಮಾರಿಕಾಂಬ ಯೂತ್ ಕ್ಲಬ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಪಡುವರಿ ಗ್ರಾಪಂ ಉಪಾಧ್ಯಕ್ಷ ಸದಾಶಿವ ಡಿ. ಪಡುವರಿ, ಸದಸ್ಯ ಸಂಜೀವ ಮೊಗವೀರ, ಸುದರ್ಶನ ಹೆಗ್ಡೆ, ಕರುಣಾಕರ್ ಶೆಟ್ಟಿ, ಕೃಷ್ಣ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ಎ.ಎಸ್.ಹೆಗ್ಡೆ ಉಪಸ್ಥಿತರಿದ್ದರು. ಮಾರಿಕಾಂಬಾ ಯೂತ್ ಕ್ಲಬ್ ಸದಸ್ಯ ಪ್ರವೀಣ ಕಳವಾಡಿ ಸ್ವಾಗತಿಸಿ, ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ ಕಳವಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Exit mobile version