Kundapra.com ಕುಂದಾಪ್ರ ಡಾಟ್ ಕಾಂ

ದೇಶಪ್ರೇಮದಿಂದ ಸೇನೆಯನ್ನು ಸೇರಬೇಕು: ಡಾ. ಸುಬ್ರಹ್ಮಣ್ಯ ಭಟ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೇವಲ ವೃತ್ತಿಗಾಗಿ ಸೇನೆಗೆ ಸೇರದೆ, ದೇಶಪ್ರೇಮದಿಂದ ಯುವಜನತೆ ಸೈನಿಕರಾಗಬೇಕಾಗಿದೆ. ಶ್ರೀಮಂತ ವರ್ಗದವರು ದೇಶ ಕಾಯುವ ಕಾಯಕಕ್ಕೆ ತಮ್ಮ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಚಿಕ್ಕಂದಿನಿಂದಲೇ ಮಕ್ಕಳಿಗೆ ರಾಷ್ಟ್ರಪ್ರೇಮದ ಪಾಠವನ್ನು ಸರಿಯಾಗಿ ಹೇಳಿದರೆ ಮುಂದೆ ಅವರು ದೇಶಸೇವೆಗೆ ಸ್ವಯಂಪ್ರೇರಿತರಾಗಿ ಎದ್ದು ನಿಲ್ಲುತ್ತಾರೆ. ಈ ದಿಸೆಯಲ್ಲಿ ಪೋಷಕರು ಮತ್ತು ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕಿದೆ ಎಂದು ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಹೇಳಿದರು.

ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ಹಾಗೂ ಗೀತಾನಂದ ಫೌಂಡೇಷನ್ ಮಣೂರು ಇವರ ಜಂಟಿ ಆಶ್ರಯದಲ್ಲಿ ನಡೆದ ತಿಂಗಳ ಸಡಗರ ಸರಣಿಯ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾಡ ಗುಡ್ಡೇಅಂಗಡಿ ನಿವಾಸಿ ಮಾಜಿ ಸೈನಿಕರೂ ಹಿರಿಯರೂ ಆದ ವೆನೆಸಿಸ್ ಪಿರೇರಾ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಹಿಂದೆಲ್ಲಾ ಸೈನಿಕರ ಜೀವನ ದುಸ್ತರವಾಗಿತ್ತು. ಶಸ್ತ್ರಾಸ್ತ್ರಗಳ ಕೊರತೆ ಇತ್ತು, ಆದರೆ ಈಗ ನಮ್ಮ ದೇಶದ ಮೂರು ಸೇನೆಗಳು ಸದೃಢವಾಗಿದ್ದು, ಶತ್ರುರಾಷ್ಟ್ರಗಳ ಆಕ್ರಮಣವನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವ ತಾಕತ್ತು ನಮಗಿದೆ. ಸೈನಿಕರ ಕುರಿತಾಗಿ ಪ್ರತಿಯೊಬ್ಬರಿಗೂ ಹೆಮ್ಮೆ, ಅಭಿಮಾನ, ಗೌರವ ಇರಬೇಕು. ಆಗ ಗಡಿಯಲ್ಲಿ ತಮ್ಮ ಜೀವವನ್ನು ಒತ್ತೆಯಿರಿಸಿ ನಮ್ಮನ್ನು ಕಾಯುವ ಯೋಧರಿಗೆ ಕೆಲಸ ಮಾಡಲು ಇನ್ನಷ್ಟು ಹುಮ್ಮಸ್ಸು, ಉತ್ಸಾಹ ಬರುತ್ತದೆ ಎಂದರು.

ಸಾಮಾಜಿಕ ಕಾರ್ಯಕರ್ತ ಪ್ರಭು ಕೆನಡಿ ಪಿರೇರಾ, ಮಂಜುನಾಥ ಹೆಬ್ಬಾರ್, ಶಿಕ್ಷಕ ಸ್ಟಾಲಿನ್ ಪಿರೇರಾ, ಪ್ರಭು ಆರ್ಥರ್ ಪಿರೇರಾ, ಪ್ರಕಾಶ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು. ಕುಂದಾಪುರ ಕಸಾಪ ಘಟಕದ ಕಾರ್ಯದರ್ಶಿ ಡಾ. ಕಿಶೋರಕುಮಾರ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ರವೀಂದ್ರ ಎಚ್. ವಂದನಾರ್ಪಣೆಗೈದರು.

Exit mobile version