Kundapra.com ಕುಂದಾಪ್ರ ಡಾಟ್ ಕಾಂ

ನಾಡ ಗ್ರಾಪಂನಲ್ಲಿ ರೂ.10.50ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಾಲ್ಕೂವರೆ ವರ್ಷದ ಸತತ ಪ್ರಯತ್ನದ ಫಲವಾಗಿ ನಾಡ ಗ್ರಾಮ ಪಂಚಾಯತಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲು ಯಶಸ್ವಿಯಾಗಿದ್ದು, ಮುಂದಿನ ಹನ್ನೊಂದು ತಿಂಗಳ ಅವಧಿಯಲ್ಲಿ ನಾಡಾ, ಸೇನಾಪುರ, ಬಡಾಕೆರೆ ಹಾಗೂ ಹಡವು ಗ್ರಾಮದ ಜನರಿಗೆ ಕುಡಿಯುವ ನೀರು ದೊರೆಯಲಿದೆ. ಸೌಪರ್ಣಿಕ ಹೊಳೆಯಲ್ಲಿ ಸಾಕಷ್ಟು ನೀರು ದೊರೆಯುವುದರಿಂದ ಈ ಯೋಜನೆಯನ್ನು ಒಂದು ಗ್ರಾಮಕ್ಕೆ ವಿಸ್ತರಿಸುವ ಬಗೆಗೆ ಪ್ರಯತ್ನಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು.

ಅವರು ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಣ್ಕಿ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ರೂ. 10.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಬಳಿಕ ಮಾತನಾಡಿದರು. ಆರ್‌ಡಿಪಿಆರ್ ಕಮಿಟಿ ಛೇರ್‌ಮೆನ್ ಆದ ಬಳಿಕ ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸಿ, ಎಂಟು ಭಾರಿ ಟೆಂಡರ್ ಕರೆದರೂ ಯಾರೊಬ್ಬರೂ ಟೆಂಟರ್ ತೆಗೆದುಕೊಳ್ಳಲು ಮುಂದೆ ಬಂದಿರಲಿಲ್ಲ. ಅಂತಿಮವಾಗಿ ಮಂಗಳೂರಿನ ಸಂಸ್ಥೆಯೊಂದು ಗುತ್ತಿಗೆ ಪಡೆದುಕೊಂಡು ಹನ್ನೊಂದು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಿಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಶಿರೂರು ಮತ್ತು ಪಡುವರಿಯಲ್ಲಿ ಸಮುದ್ರ ನೀರನ್ನು ಶುದ್ಧಿಕರಿಸಿ ಕುಡಿಯುವ ನೀರನ್ನಾಗಿಸುವ ಯೋಜನೆ ಅನುಷ್ಠಾನ ಹಂತದಲ್ಲಿದ್ದರೇ, ಬೈಂದೂರು, ಯಡ್ತರೆ ಹಾಗೂ ಚಿತ್ತೂರು ಬಹುಗ್ರಾಮ ಯೋಜನೆ ಶೀಘ್ರ ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ ಎಂದರು.

2015ರ ತನಕ ಸರಕಾರಿ ಜಾಗದಲ್ಲಿ ಕುಳಿತುಕೊಂಡವರಿಗೆ ನಿವೇಶನ ನೀಡಲು ಸರಕಾರ ಕಾನೂನು ಮಾಡಿದೆ. ಜಮೀನಿನಲ್ಲಿ ಕೃಷಿ ಮಾಡಿಕೊಂಡು ಕುಳಿತವರಿಗೆ ನಿವೇಶನ ನೀಡುವ ಕಾನೂನಿಗೆ ರಾಷ್ಟ್ರಪತಿ ಅಂಕಿತ ಹಾಕಿದ್ದು ಗಜೇಟ್ ನೋಟಿಫಿಕೇಶನ್ ಹೊರಡಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರಕಾರ ಅಧಿಕಾರದಲ್ಲಿ ಬಂದ ಬಳಿಕ ನೀಡಿರುವ ಭರವಸೆಗಳನ್ನು ಈಡೇರಿಸಿದೆ ಎಂದವರು ಹೇಳಿದರು.

ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಶೆಟ್ಟಿ ತಗ್ಗರ್ಸೆ, ತಾಲೂಕು ಪಂಚಾಯತ್ ಉಪಾಧ್ಯಕ್ಷ ಪ್ರವೀಣಕುಮಾರ್ ಶೆಟ್ಟಿ, ಸದಸ್ಯ ಜಗದೀಶ ಪೂಜಾರಿ, ನಾಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೇನ್‌ಮೇರಿ ಒಲವೆರಾ, ಉಪಾಧ್ಯಕ್ಷ ಅರವಿಂದ್, ಯೋಜನೆಯ ಮುಖ್ಯ ಅಭಿಯಂತರರಾದ ಮಹಂತೇಶ್ ಆರ್. ಮಂಡಿ, ಸಹಾಯಕ ಅಭಿಯಂತರ ರಾಜ್‌ಕುಮಾರ್, ಹಿರಿಯ ಅಭಿಯಂತರ ಶ್ರೀಧರ ಪಾಲೇಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಿಯಾಜ್ ಅಹಮ್ಮದ್, ಗುತ್ತಿಗೆದಾರ ಅನಿಲ್‌ಕುಮಾರ್ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Exit mobile version