Kundapra.com ಕುಂದಾಪ್ರ ಡಾಟ್ ಕಾಂ

ವಾರಾಹಿ ಪ್ರಗತಿ ಪರಿಶೀಲನೆಯಲ್ಲಿ ಮತ್ತದೇ ಚರ್ಚೆ. ಬಗೆಹರಿಯದ ಸಂತ್ರಸ್ಥರ ಗೋಳು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಾರಾಹಿ ಯೋಜನೆಯಡಿ ಪರಿಶಿಷ್ಟ ಪಂಗಡದ ಜನತೆಯ ಉಪಯೋಗಕ್ಕಾಗಿ ನಡ್ಪಾಲು ನಲ್ಲಿ ನಿರ್ಮಿಸಿರುವ ಕಿಂಡಿ ಅಣೆಕಟ್ಟಿನಿಂದ , ಪ.ವರ್ಗದ ಜನತೆಗೆ ಪ್ರಯೋಜನ ದೊರೆಯದೇ ಇದ್ದು, ಈ ಕಾಮಗಾರಿ ನಡೆಸಿರುವವರ ವಿರುದ್ದ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡೆ , ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಅವರು, ಕುಂದಾಪುರ ತಾಲೂಕು ಪಂಚಾಯತ್ ನಲ್ಲಿ ಉಡುಪಿ ಜಿಲ್ಲಾ ವಾರಾಹಿ ಯೋಜನೆಗೆ ಸಂಬಂದಿಸಿದಂತೆ, ವಾರಾಹಿ ಯೋಜನೆಯೆ ಎಡ ದಂಡೆ ಮತ್ತು ಬಲದಂಡೆ ಹಾಗೂ ಉಪ ಕಾಲುವೆ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡು ಬಂದ ಕಾಮಗಾರಿಗಳ ನ್ಯೂನತೆಗಳನ್ನು ಸರಿಪಡಿಸಲು ನೀಡಲಾದ ನಿರ್ದೇಶನ ಮತ್ತು ಕೈಗೊಂಡ ಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಾರಾಹಿ ಯೋಜನೆಯಡಿ ಬುಡಕಟ್ಟು ಜನರ ಉಪಯೋಗಕ್ಕಾಗಿ , ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ನಡ್ಪಾಲು ಗ್ರಾಮದಲ್ಲಿ ೯೦ ಲಕ್ಷ ಮತ್ತು ೪೦ ಲಕ್ಷ ವೆಚ್ಚದಲ್ಲಿ ೨ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿದ್ದು, ಈ ಅಣೆಕಟ್ಟಿನಿಂದ ಜನತೆಗೆ ಯಾವುದೇ ಪ್ರಯೋಜನ ದೊರೆಯುತ್ತಿಲ್ಲ ಎಂದು ಅಮಾಸೆಬೈಲು ಗ್ರಾ.ಪಂ. ಸದಸ್ಯ ಕೃಷ್ಣ ಪೂಜಾರಿ ಅವರು ಸಭೆಯಲ್ಲಿ ತಿಳಿಸಿದ್ದು, ಈ ಕುರಿತಂತೆ ಸದ್ರಿ ಕಾಮಗಾರಿ ನಡೆಸಿದವರ ವಿರುದ್ದ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಪ್ರಮೋದ್ ತಿಳಿಸಿದರು.

ವಾರಾಹಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ನಡೆಸಿರುವ ಸ್ಪೋಟದಿಂದ ರಾಮಚಂಧ್ರ ಮೆಂಢನ್ ಎಂಬುವವರ ಮನೆ ಬಿರುಕು ಬಿಟ್ಟಿದ್ದು ಅವರಿಗೆ ೧೫ ದಿನದ ಒಳಗೆ ಸೂಕ್ತ ಪರಿಹಾರ ನೀಡಿ, ಖುದ್ದು ತಮಗೆ ವರದಿ ನೀಡುವಂತೆ ವಾರಾಹಿ ಯೋಜನೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಈಗಾಗಲೇ ಭೂ ಸ್ವಾಧೀನ ಪಡಿಸಿಕೊಂಡಿರುವ ಜಮೀನಿನಲ್ಲಿ ಅಗತ್ಯತೆ ಕಂಡುಬರದ ಭೂಮಿಯನ್ನು ಸ್ವಾಧೀನದಿಂದ ಕೈಬಿಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಕಾಮಗಾರಿಗೆ ಅಗತ್ಯಕ್ಕಿಂತ ಹೆಚ್ಚು ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಲ್ಲಿ ಸೇರಿಸಿದ್ದು, ಅಂತಹ ಭೂಮಿಗೆ ಯಾವುದೇ ಪರಿಹಾರ ನೀಡಿಲ್ಲ, ಈ ಭೂಮಿಯು ಆರ್.ಟಿ.ಸಿ ಯಲ್ಲಿ ವಾರಾಹಿ ಯೋಜನೆಗೆ ಮೀಸಲಾದ ಜಾಗ ಎಂದು ತೋರಿಸುತ್ತಿದ್ದು, ಇದರಿಂದಾಗಿ ರೈತರು ಸದ್ರಿ ಭೂಮಿಯಲ್ಲಿ ಮನೆ ಕಟ್ಟಲು ಅಥವಾ ಮಾರಾಟ ಮಾಡಲು ಸಾಧ್ಯವಾಗಿಲ್ಲದೇ ಇರುವುದರಿಂದ , ಅಗತ್ಯವಿಲ್ಲದ ಭೂಮಿಯನ್ನು ಆರ್.ಟಿ.ಸಿ ಯಿಂದ ತೆಗೆಯುವಂತೆ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಅವರಿಗೆ ತಿಳಿಸಿದರು.

ಉಳ್ಳೂರು ಗ್ರಾಮದ ಜಾಂಬೂರಿನ ರಾಜಲಕ್ಷ್ಮಿ ಎಂಬುವವರು ತಮ್ಮ ಫಲವತ್ತಾದ ತೋಟ ವಾರಾಹಿ ನೀರಿನಿಂದ ಸಂಪೂರ್ಣ ನಾಶವಾಗಿದ್ದು ಇದಕ್ಕೆ ಸೂಕ್ತ ಪರಿಹಾರ ನೀಡುವಂತೆ ಕೋರಿದರು, ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಈಗಾಗಲೇ ಸ್ಥಳ ಪರಿಶೀಲನೆ ಮಾಡಿ ೧೨.೬೨ ಲಕ್ಷ ಪರಿಹಾರ ಪ್ರಸ್ತಾವನೆಯನ್ನು ವಾರಾಹಿ ಇಂಜಿನಿಯರ್ ಗೆ ನೀಡಲಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು, ಈ ಪ್ರಕರಣದ ಕುರಿತಂತೆ ಬೆಂಗಳೂರಿನ ನೀರಾವರಿ ಇಲಾಖೆಯ ಮುಖ್ಯ ಅಧಿಕಾರಿಗಳೊಂದಿಗೆ ಮಾತನಾಡಿದ ಸಚಿವರು ಆದ್ಯತೆಯ ಮೇಲೆ ಈ ಪ್ರಕರಣ ಇತ್ಯರ್ಥ ಪಡಿಸುವಂತೆ ಸೂಚಿಸಿದರು.

ಉಳ್ಳೂರು ಗ್ರಾಮದಿಂದ ಸುಮಾರು ೮ ಕಿಮೀ ವರೆಗೆ ವಾರಾಹಿ ಕಾಲುವೆ ನೀರು ೭೦ ಮೀಟರ್ ಭೂಮಿಯ ಕೆಳಗೆ ಹಾದು ಹೋಗಿದ್ದು, ಇದರಿಂದ ಸಮೀಪದ ರೈತರ ಬಾವಿಗಳಲ್ಲಿ ನೀರು ಬತ್ತಿ ಹೋಗುತ್ತಿದ್ದು, ಕೃಷಿ ಮತ್ತು ಕುಡಿಯುವ ನೀರಿಗೆ ನೀರಿನ ಸಮಸ್ಯೆ ಅಧಿಕವಾಗಿದೆ ಎಂದು ಸಂಜೀವ ಶೆಟ್ಟಿ ಎಂಬುವವರು ಕೋರಿದರು, ಈ ಭಾಗದಲ್ಲಿ ನೀರಿನ ಸಮಸ್ಯಗೆ ತಾತ್ಕಾಲಿಕವಾಗಿ ನೀರಿನ ವ್ಯವಸ್ಥೆ ಮಾಡುವಂತೆ ಸಚಿವರು ಸೂಚಿಸಿದರು.

ಸಭೆಗೆ ಸಂತ್ರಸ್ಥ ಗ್ರಾಮಸ್ಥರನ್ನು ನೇರವಾಗಿ ಆಹ್ವಾನಿಸಿದೇ, ಸಂಬಂದಪಟ್ಟ ಗ್ರಾಮ ಪಂಚಾಯತ್ ನ ನೋಟೀಸ್ ಬೋರ್ಡಿನಲ್ಲಿ ಅವರ ಹೆಸರು ಪ್ರಕಟಿಸಿರುವ ಅಧಿಕಾರಿಗಳ ಕ್ರಮದ ವಿರುದ್ದ ಸಚಿವರು ತೀವ್ರ ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ , ವಾರಾಹಿಯ ಮುಖ್ಯ ಇಂಜಿನಿಯರ್ ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು.

ಕೃಷಿನಂಬಿ ಬದುಕುತ್ತಿದ್ದ ನಮ್ಮ ತೋಟದಲ್ಲಿ ವಾರಾಹಿ ಯೋಜನೆ ನೀರು ನಿಂತು ಒಂದು ಎಕ್ರೆ ಅಡಕೆ, ತೆಂಗಿನ ಮರ ಸತ್ತು ಹೋಗಿದೆ. ನಾವು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ದಿಕ್ಕು ಕಾಣದೆಉಡುಪಿ ಕಲ್ಯಾಣ ಮಂಟಪದಲ್ಲಿ ಕೆಲಸ ಮಾಡಿ ತುತ್ತಿನಚೀಲ ತುಂಬಿಸಿಕೊಳ್ಳುವ ಸ್ಥಿತಿ ಮುಟ್ಟಿದ್ದೇವೆ. ಸ್ಥಳಕ್ಕೆ ಜಿಲ್ಲಾಧಿಕಾರಿಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಡಕೆ, ತೆಂಗಿನ ಮರ ಸತ್ತುಉತ್ಪಾದನೆಯೇ ನಿಂತು ಹೋಗಿದೆ.ಕಳೆದ ನಾಲ್ಕುವರ್ಷದಿಂದ ಪರಿಹಾರಕ್ಕಾಗಿಅಲೆದು ಸುಸ್ತಾಗಿದ್ದೇವೆ. ನಾವು ಬದುಕಬೇಕಾಆತ್ಮಹತ್ಯೆ ಮಾಡಿಕೊಳ್ಳಬೇಕಾ ಎಂದು ಉಳ್ಳೂರು-೭೪ ಗ್ರಾಮ ನಿವಾಸಿ ರಾಜಲಕ್ಮೀಅಸಾಹಯಕತೆಯಿಂದಕಣ್ಣೀರಾದರು.
ವಾರಾಹಿ ನೀರಾವರಿ ಇಲಾಖೆ ಇಂಜಿನಿಯರ್ ರೈತರ ಪರ ಇಲ್ಲದೆ, ಗುತ್ತಿಗೆದಾರರ ರಕ್ಷಣೆ ಮಾಡುತ್ತಿದ್ದಾರೆ. ಸಭೆಯಲ್ಲಿ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿ ದಿಕ್ಕುತಪ್ಪಿಸುತ್ತಿದ್ದಾರೆ. ರೈತರ ಹಾಗೂ ಕುಡಿಯುವ ನೀರಿನ ಸಲುವಾಗಿ ಪ್ರಾರಂಭಿಸಿದ ವಾರಾಹಿ ಯೋಜನೆ ರೈತರಿಗೆ ಕಿಲುಬು ಕಾಸಿನ ಪ್ರಯೋಜನಕ್ಕೂ ಬಾರದೆ, ಯಾರದ್ದೋ ಹಿತಕಾಪಾಡಲು ಶ್ರಮಿಸಲಾಗುತ್ತದೆ. ರೈತರ ಸಂಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳು ಹಾಳಾಗಿ ಹೋಗುತ್ತೀರಿ. ಸರ್ಕಾರಕೊಡುವ ಸಂಬಳ ಹಾಳಾಗಿ ಹೋಗಲಿ ಎಂದು ರೈತರು ಶಪಿಸಿದರು. ಒಟ್ಟಾರೆ ಮೂರನೇ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾಧನೆ ಸೊನ್ನೆಸುತ್ತಿದ್ದು, ಅದೇ ಸಮಸ್ಯೆ..ಅದೇಚರ್ಚೆಗೆ ಪ್ರಗತಿ ಮೀಸಲಾಗುದ್ದು ದುರಂತ.

Exit mobile version