Kundapra.com ಕುಂದಾಪ್ರ ಡಾಟ್ ಕಾಂ

ಅಡಿಗರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ: ಪ್ರೋ. ಸೋಮಯಾಜಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಟ್ಟುವೆವು ನಾವು ಹೊಸ ನಾಡೊಂದನ್ನು, ರಸದ ಬೀಡೊಂದನ್ನು ಎನ್ನುವ ಗೋಪಾಲಕೃಷ್ಣ ಅಡಿಗರ ಹುಮ್ಮಸ್ಸು ಇಂದಿನ ಯುವಜನತೆಯಲ್ಲಿ ಉಕ್ಕಬೇಕಾಗಿದೆ. ಅಂದು ಅವರು ಕಂಡ ಕನಸು, ಗುರಿ ಸಂಪೂರ್ಣವಾಗಿ ನನಸಾಗಿಲ್ಲ. ಅವರ ಚಿಂತನೆ ಹಾಗೂ ದೂರದೃಷ್ಟಿ ಸಾರ್ವಕಾಲಿಕವಾಗಿ ಪ್ರಸ್ತುತವಾದುದು. ನವ್ಯದ ಹೊಸ ದಾರಿಯನ್ನು ಕನ್ನಡದ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಅಡಿಗರ ಕವಿತೆಗಳು ಇಂದಿಗೂ ಅನ್ವಯಿಸುವ ಸಂದೇಶವನ್ನು ಸಾರುತ್ತವೆ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೋ. ಉಪೇಂದ್ರ ಸೋಮಯಾಜಿ ಹೇಳಿದರು.

ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಕಂಬದಕೋಣೆ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಕಂಬದಕೋಣೆ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕಸಾಪ ಮತ್ತು ಗೀತಾನಂದ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ನಡೆದ ಭಾವಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಒಂದು ವರ್ಗದ ಕಣ್ಣು ತೆರೆಸಿದ ಕವಿ ಅಡಿಗರು ಎನ್ನುವ ಮಾತಿದೆ. ಆದರ್ಶ, ಕಲ್ಪನೆಯೊಳಗೆ ತೇಲುತ್ತಿದ್ದ ಸಾಹಿತ್ಯ ಲೋಕವನ್ನು ವಾಸ್ತವದ ನೆಲೆಗಟ್ಟಿನಲ್ಲಿ ಕಟ್ಟಿಕೊಡಬಲ್ಲ ಸಾಹಿತ್ಯಗಳನ್ನು ರಚಿಸುವ ಮೂಲಕ ಹೊಸ ಹಾದಿಯಲ್ಲಿ ಮುನ್ನೆಡೆಸಿದ್ದು ಅಡಿಗರ ಹೆಚ್ಚುಗಾರಿಕೆ. ಅಡಿಗರ ಜನ್ಮಶತಾಬ್ದಿಯ ಈ ಹೊತ್ತಿನಲ್ಲಿ ಅವರ ಸಾಹಿತ್ಯದ ಮರು ಓದು ಹಾಗೂ ಚಿಂತನೆ ಮಾಡುವುದು ಅತೀಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮವನ್ನು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಜಯಲಕ್ಷ್ಮೀ ಕಾರಂತ ಉದ್ಘಾಟಿಸಿದರು. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಗಾಯಕ ಚಂದ್ರಶೇಖರ ಕೆದಿಲಾಯ ಅಡಿಗರ ಭಾವಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಸಂವೇದನಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಸಂಧ್ಯಾ ಭಟ್ ಉಪಸ್ಥಿತರಿದ್ದರು. ಉಪನ್ಯಾಸಕಿ ಶೈಲಜಾಕುಮಾರಿ ಸ್ವಾಗತಿಸಿದರು, ಕನ್ನಡ ಉಪನ್ಯಾಸಕ ರಮೇಶ ಗೌಡ ಕಾರ್ಯಕ್ರಮ ನಿರೂಪಿಸಿ, ಅಶೋಕ ನಾಯಕ್ ವಂದಿಸಿದರು.

Exit mobile version