Kundapra.com ಕುಂದಾಪ್ರ ಡಾಟ್ ಕಾಂ

ಮಾನವೀಯ, ಸಮಾಜಶೀಲರಾಗವಂತೆ ಮಾಡುವುದು ಕಲೆಯ ಉದ್ದೇಶ: ಚಂದ್ರಶೇಖರ ಕೆದ್ಲಾಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸ್ಥಳಿಯ ಪ್ರತಿಭೆಗಳಿಗೆ ಅವಕಾಶ ಕೊಡುವುದು ದೊಡ್ಡ ಕೆಲಸ. ಮಕ್ಕಳಿಗೆ ಕೊಡಬೇಕಾಗಿರುವುದು ಅವಕಾಶವೇ ಹೊರತು ಬಹುಮಾನವಲ್ಲ. ಕಲೆಯ ಉದ್ದೇಶ ಇನ್ನಷ್ಟು ಮಾನವೀಯರಾಗುವುದು, ಸಮಾಜಶೀಲರಾಗುವುದು ಮತ್ತು ಆ ಮೂಲಕ ದೇಶ ಸೇವೆಗೆ ತೊಡಗಿಕೊಳ್ಳುವಂತೆ ಮಾಡುವುದೇ ಆಗಿದೆ ಎಂದು ಆಕಾಶವಾಣಿ ಕಲಾವಿದ ಚಂದ್ರಶೇಖರ ಕೆದ್ಲಾಯ ಅಭಿಪ್ರಾಯಪಟ್ಟರು.

ನಾಗೂರಿನ ಕುಸುಮ ಫೌಂಡೇಶನ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮೂರನೇ ಆವೃತ್ತಿಯ ಕುಸುಮಾಂಜಲಿ-2017ರ ’ಗಾನಕುಸುಮ’ ಸಂಗೀತ ಸ್ಪರ್ಧಾಳುಗಳ ಅಯ್ಕೆ (ಅಡಿಶನ್ ರೌಂಡ್) ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿ ಮತನಾಡಿದರು. ಇಂದು ಮಕ್ಕಳ ತಲೆಮೇಲೆ ಬೇಡದ ಹೊರೆಯನ್ನು ಹೊರಿಸಿ ಅವರಲ್ಲಿನ ಲವಲವಿಕೆ, ಭಾವನಾತ್ಮಕೆಯನ್ನೇ ಕಿತ್ತುಕೊಳ್ಳುತ್ತಿದ್ದಾರೆ. ಎಲ್ಲದಲ್ಲೂ ಪ್ರತಿಫಲಾಕ್ಷೆ ಬಯಸುತ್ತಿರುವುದು ಹೊಸ ತಲೆಮಾರಿನ ಮಕ್ಕಳನ್ನು ಕಂಗೆಡಿಸಿಬಿಟ್ಟಿದೆ. ಸಂಗೀತ ಮನಸ್ಸು ಹಗುರಗೊಳಿಸುವ ಮೂಲಕ ಭಾವನೆಗಳನ್ನು ಹೆಚ್ಚಿಸಿ ಮೆಚ್ಚಿಸಲು ಸಹಕಾರಿಯಗುತ್ತದೆ ಎಂದರು.

ಕುಸುಮಾ ಗೂಪ್ ಪ್ರವರ್ತಕ ನಳಿನ್‌ಕುಮಾರ್ ಶೆಟ್ಟಿ ಪ್ರಾಸ್ತಾವಿಸಿ, ತಾಲೂಕಿನ ಪ್ರತಿಭಾನ್ವಿತ ಕಲಾವಿದರನ್ನು, ಗಾಯಕರನ್ನು ಗುರುತಿಸಿ ಪ್ರೋತ್ಸಾಸುವ ಸಂಕಲ್ಪದೊಂದಿಗೆ ಸಂಸ್ಥೆ ತನ್ನ ಮೂರನೇ ಗಾನಕುಸುಮ ಅವೃತ್ತಿಯನ್ನು ಪ್ರಾರಂಭಿಸಲಾಗುತ್ತಿದೆ. ಸ್ಪರ್ಧೆಯು ಮೂರು ಹಂತಗಳಲ್ಲಿ ನಡೆಯಲಿದ್ದು, ಸೆಮಿಫೈನಲ್‌ನಲ್ಲಿ 12 ವಿಜೇತರನ್ನು ಫೈನಲ್‌ಗೆ ಆಯ್ಕೆ ಮಾಡಲಾಗುವುದು. ಅಂತಿಮ 12 ಗಾಯಕರ ಆಯ್ಕೆಗೆ ಫೈನಲ್ ಸ್ಪರ್ಧೆಯು ನಡೆಯಲಿದ್ದು, ಡಿ.24ರಂದು ನಡೆಯುವ ಕುಸುಮಾಂಜಲಿ-೨೦೧೭ರ ಕಾರ್ಯಕ್ರಮದಲ್ಲಿ ಇವರಲ್ಲಿ ಎಂಟು ಉತ್ತಮ ಗಾಯಕರಿಗೆ ವೃತ್ತಿಪರ ಗಾಯಕರೊಂದಿಗೆ ಹಾಡುವ ಅವಕಾಶ ನೀಡಲಾಗುವುದು. ಈ ಎಂಟು ಮಂದಿಯಲ್ಲಿ ವಿಜೇತರಾಗುವ ಇಬ್ಬರಿಗೆ (ಜ್ಯೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ತಲಾ ಒಬ್ಬರು) ’ಗಾನಕುಸುಮ 2017’ ಪ್ರಶಸ್ತಿ ನೀಡಲಾಗುವುದು ಎಂದರು.

ನಿವೃತ್ತ ಶಿಕ್ಷಕಿ ಸುಧಾ ರಾಮಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಕುಸುಮಾಂಜಲಿಯ ಚಾನೆಲ್ ಪಾರ್ಟ್‌ನರ್, ಮುಂಬೈ ಉದ್ಯಮಿ ಲಕ್ಷ್ಮಣ ಪೂಜಾರಿ, ಗಾಯಕಿ ಪಲ್ಲವಿ ತುಂಗ ಉಪಸ್ಥಿತರಿದ್ದರು. ಶ್ವೇತಾ ಪ್ರಾರ್ಥಿಸಿದರು. ರೇಷ್ಮಾ ನಿರೂಪಿಸಿದರು.

Exit mobile version