ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ಕ್ರೀಡಾಕೂಟಗಳು ಸಹಕಾರಿಯಾಗುತ್ತದೆ. ಕ್ರೀಡಾಪಟುಗಳು ಕ್ರೀಡಾಂಗಣದಲ್ಲಿ ಕ್ರೀಡಾಸ್ಫೂರ್ತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ತಮ್ಮಲ್ಲಿರುವ ಪ್ರತಿಭೆಯನ್ನು ಹಿಡಿದಿಟ್ಟು ಅದನ್ನು ಸಮಾಜಕ್ಕೆ ತೋರಿಸಿದರೆ ಮಾತ್ರ ಉತ್ತಮ ಕ್ರೀಡಾಪಟುವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.
ಬೈಂದೂರು ಗಾಂಧಿಮೈದಾನದಲ್ಲಿ ನಡೆದ ಸರಕಾರಿ ಪದವಿಪೂರ್ವ ಕಾಲೇಜಿನ ೨೦೧೭-೧೮ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಮಕ್ಕಳಲ್ಲಿರುವ ಸೃಜನಾತ್ಮಕ ಸಾಮರ್ಥ್ಯ ಹಾಗೂ ಸುಪ್ತ ಪ್ರತಿಭೆಯನ್ನು ಸ್ಪರ್ಧೆಯ ಮೂಲಕ ಹೊರಹೊಮ್ಮಿಸುವುದರ ಜತೆಗೆ ಅವರ ಅಭಿವೃದ್ಧಿಗಾಗಿ ಮತ್ತು ಗುಣಾತ್ಮಕ ಕಲಿಕೆಯನ್ನು ಪ್ರೋತ್ಸಾಹಿಸುವ ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಬಲ್ಲದು. ಕಾಳಜಿ ಹಾಗೂ ಪ್ರೀತಿಯಿಂದ ಮಕ್ಕಳಲ್ಲಿ ಅಡಗಿರುವ ಕ್ರೀಡಾಸ್ಪೂರ್ತಿಗೆ ಉತ್ತೇಜನ ದೊರೆತಾದ ಮಾತ್ರ ಅವು ಗುಣಾತ್ಮಕವಾಗಿ ಪ್ರಕಟಗೊಳ್ಳುತ್ತದೆ. ಕ್ರೀಡೆಯಲ್ಲಿ ಆಸಕ್ತಿಯಿದ್ದರೆ ಮಾತ್ರ ಸಾಧನೆಗೈಯಲು ಸಾಧ್ಯವಿದೆ. ಆಸಕ್ತರಿಗೆ ಸೂಕ್ತ ಸಮಯದಲ್ಲಿ ದೊರೆಯುವ ಅವಕಾಶದಿಂದ ಪ್ರತಿಭೆ ಬೆಳಕಿಗೆ ಬರುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪಾಲಾಕ್ಷ ಟಿ. ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ವಿದ್ಯಾರ್ಥಿನಿ ಪ್ರೇಕ್ಷಾ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಗಣೇಶ ಪೂಜಾರಿ, ತಿಮ್ಮಪ್ಪ ಸರ‍್ದಾರ್, ಸೀತಾರಾಮ, ಮಣಿಕಂಠ ದೇವಾಡಿಗ ಉಪಸ್ಥಿತರಿದ್ದರು. ಉಪನ್ಯಾಸಕ ಜಯ ಪೂಜಾರಿ ಸ್ವಾಗತಿಸಿ, ಕೆಂಚನೂರು ಪ್ರದೀಪ್ ಕುಮಾರ್ ಶೆಟ್ಟಿ ನಿರೂಪಿಸಿ ವಂದಿಸಿದರು.