Kundapra.com ಕುಂದಾಪ್ರ ಡಾಟ್ ಕಾಂ

ರಾಷ್ಟ್ರೀಯ ಸಮಾಲೋಚನೆಯಲ್ಲಿ ಸ್ಥಳೀಯಾಡಳಿತ ಬಲವರ್ಧನೆ ಪ್ರತಿಪಾದನೆಗೆ ನಿರ್ಧಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾನವ ಹಕ್ಕುಗಳ ಪ್ರತಿಪಾದನೆ ಮತ್ತು ಸಂಶೋಧನಾ ಪ್ರತಿಷ್ಠಾನವು ನವದೆಹಲಿಯ ಕಾನ್ಸ್ಟಿಟ್ಯೂಶನಲ್ ಕ್ಲಬ್‌ನಲ್ಲಿ ಈಚೆಗೆ ನಡೆಸಿದ ಎರಡು ದಿನಗಳ ರಾಷ್ಟ್ರೀಯ ಸಮಾಲೋಚನಾ ಸಭೆಯಲ್ಲಿ ದೇಶದ ಸ್ಥಳೀಯಾಡಳಿತಗಳ ಬಲವರ್ಧನೆಗಾಗಿ ಸಂವಿಧಾನ ತಿದ್ದುಪಡಿ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರಗಳ ಮೇಲೆ ಒತ್ತಾಸೆ ತರುವ ನಿರ್ಧಾರ ಕೈಗೊಂಡಿತು. ಈ ಉದ್ದೇಶ ಸಾಧನೆಗಾಗಿ ಇದೇ ಗುರಿಹೊಂದಿರುವ ಸಂಸ್ಥೆಗಳ ಮತ್ತು ಸಮಾನ ಮನಸ್ಕ ವ್ಯಕ್ತಿಗಳ ಸಹಯೋಗ ಪಡೆದುಕೊಳ್ಳಲು ತೀರ್ಮಾನಿಸಿತು.

ಪಂಚಾಯತ್ ರಾಜ್ ಮತ್ತು ಪೌರಾಡಳಿತ ಸಂಸ್ಥೆಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂವಿಧಾನದ ೭೩ ಮತ್ತು ೭೪ನೆಯ ತಿದ್ದುಪಡಿಗಳು ರಾಜ್ಯಗಳಿಗೆ ನೀಡಿದ ವಿವೇಚನಾಧಿಕಾರಗಳಲ್ಲಿ ಹಲವನ್ನು ಬಂಧನೀಯಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಮತ್ತು ಆ ದಿಸೆಯ ಕಾರ್ಯವಿಧಾನಗಳ ಕುರಿತು ವಿಸ್ತೃತ ಚರ್ಚೆ ನಡೆಸಿತು. ಅದಕ್ಕಾಗಿ ರಾಷ್ಟ್ರೀಯ, ಪ್ರಾದೇಶಿಕ ಮತ್ತು ರಾಜ್ಯವಾರು ಕಾರ್ಯಪಡೆಗಳನ್ನು, ಸಂವಿಧಾನ ತಿದ್ದುಪಡಿ ಪ್ರಸ್ತಾವನೆಯ ಕರಡು ಸಿದ್ಧಪಡಿಸಲು ಪರಿಣತರ ಸಮಿತಿಯನ್ನು ರೂಪಿಸಲು ನಿರ್ಣಯಿಸಿತು. ಬದಲಾವಣೆಯ ಸಂದರ್ಭದಲ್ಲಿ ತೃಣಮೂಲ ಮತ್ತು ಜನಸಹಭಾಗಿತ್ವ ಪ್ರಜಾತಂತ್ರ ವ್ಯವಸ್ಥೆಗೆ ಸಂವಿಧಾನ ಮತ್ತು ರಾಜ್ಯಗಳ ಕಾಯಿದೆಗಳಲ್ಲಿ ಈಗ ಲಭ್ಯವಿರುವ ಅವಕಾಶಗಳ ರಕ್ಷಣೆಗೆ ಆದ್ಯತೆ ನೀಡಬೇಕು ಎಂಬ ದೃಢ ಅಭಿಪ್ರಾಯ ತಾಳಿತು.

ಮಹಿಳೆಯರು ಮತ್ತು ಬದಿಗೊತ್ತಲ್ಪಟ್ಟ ಸಮುದಾಯಗಳಿಗೆ ಒತ್ತುನೀಡಿ ಗ್ರಾಮಸಭೆಗಳ ಸದಸ್ಯರು ತಮ್ಮ ಸಾಂವಿಧಾನಿಕ ಹಕ್ಕು ಚಲಾಯಿಸಲು ಸಾಧ್ಯವಾಗುವಂತೆ ಅವರಲ್ಲಿ ಅರಿವು ಮೂಡಿಸಲು ವ್ಯಾಪಕ ಮಾಹಿತಿ ಪ್ರಸಾರಕ್ಕೆ ಪರಿಣಾಮಕಾರಿ ಕ್ರಮಗಳನ್ನು ರೂಪಿಸಲು ನಿರ್ಧರಿಸಿತು.

ಸಮಾಲೋಚನಾ ಸಭೆಯಲ್ಲಿ ದೇಶದ ೨೦ ರಾಜ್ಯಗಳಿಂದ ಬಂದ ೪೨ ನಾಗರಿಕ ಸಂಘಟನೆಗಳ ೫೯ ಪ್ರತಿನಿಧಿಗಳು ಭಾಗವಹಿಸಿದ್ದರು. ಕರ್ನಾಟಕ ಪ್ರತಿನಿಧಿಸಿದ್ದ ಬೆಂಗಳೂರಿನ ಸಿವಿಕ್ ಸಂಘಟನೆಯ ಕಾತ್ಯಾಯಿನಿ ಚಾಮರಾಜ್ ರಾಜ್ಯದಲ್ಲಿನ ಪೌರಾಡಳಿತದ ಮತ್ತು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಸಂಘಟನೆಯ ಕೃಪಾ ಎಂ. ಎಂ ಮತ್ತು ಎಸ್. ಜನಾರ್ದನ ಮರವಂತೆ ಪಂಚಾಯತ್ ರಾಜ್ ವ್ಯವಸ್ತೆಯ ಪ್ರಸಕ್ತ ಸ್ಥಿತಿಗತಿ ಮತ್ತು ಆಗಬೇಕಾಗಿರುವ ಬದಲಾವಣೆಗಳನ್ನು ಮುಂದಿಟ್ಟರಲ್ಲದೆ, ನಡೆದ ಚರ್ಚೆಗಳಲ್ಲಿ ಪಾಲ್ಗೊಂಡರು.

Exit mobile version