ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನ್ಯಾಯಕ್ಕಾಗಿ ಬರುವ ಕಕ್ಷಿದಾರರಿಗೆ ಸರಿಯಾದ ನ್ಯಾಯಕೊಡಿಸುವ ಮೂಲಕ ನ್ಯಾಯವಾದಿಗಳು ತಮ್ಮ ವಕೀಲ ವೃತ್ತಿಯ ಪಾವಿತ್ರ್ಯತೆಯನ್ನು ಕಾಪಾಡಬೇಕು ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಹೇಳಿದರು.
ಅವರು ಕುಂದಾಪುರ ವಕೀಲರ ಸಂಘ (ರಿ.) ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರ ನ್ಯಾಯಾಲಯದ ಸಂಕೀರ್ಣದಲ್ಲಿ ನಡೆದ ವಕೀಲರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ಶಿಲ್ಪಾನಾಗ್ ಅವರು ಮಾತನಾಡಿ, ನ್ಯಾಯವಾದಿಗಳ ಮಾರ್ಗಸೂಚಿ ಹಾಗೂ ನಿರ್ದೇಶನಗಳ ಮೂಲಕ ಸ್ವತಂತ್ರ ಭಾರತದ ಬಡತನ ಮತ್ತು ಅನಕ್ಷರತೆಯ ಪ್ರಮಾಣ ಕಡಿಮೆಯಾಗಲು ಕಾರಣವಾಯಿತು. ಇಂದು ಭಾರತ ಸೂಪರ್ ಪವರ್ ದೇಶವಾಗಲು ನ್ಯಾಯವಾದಿಗಳ ಪಾತ್ರ ಮಹತ್ತರವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕುಂದಾಪುರ ನಗರ ಪ್ರಾಧಿಕಾರದ ಅಧ್ಯಕ್ಷ ಹಾಗೂ ನ್ಯಾಯವಾದಿ ವಿಕಾಸ್ ಹೆಗ್ಡೆ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಅತಿದೊಡ್ಡ ಸಮೂಹ ಎಂದರೆ ನ್ಯಾಯವಾದಿಗಳ ಸಮುದಾಯವಾಗಿದೆ. ಅಂತಹ ಸಮುದಾಯದ ಹೋರಾಟದಿಂದ ಸಿಕ್ಕಿದ ಸ್ವಾತಂತ್ರ್ಯವನ್ನು ಪ್ರಶ್ನಿಸಿಕೊಳ್ಳುವ ಜವಾಬ್ದಾರಿ ಈಗಿನ ಯುವ ಸಮುದಾಯದ ನ್ಯಾಯವಾದಿಗಳ ಮೇಲಿದೆ ಎಂದರು.
ಕುಂದಾಪುರ ವಕೀಲರ ಸಂಘ (ರಿ.) ಕುಂದಾಪುರ ಇದರ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ ಅಧ್ಯಕ್ಷತೆ ವಹಿಸಿ ತಮ್ಮ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾದಾಗ ಜನ ಸಾಮಾನ್ಯರು ಮೊದಲು ಸಂಪರ್ಕಿಸುವುದು ನ್ಯಾಯವಾದಿಗಳನ್ನು, ಈ ಸಮಯದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡಾ ಸಂವಿಧಾನದ ಮೂಲಭೂತ ಹಕ್ಕುಗಳನ್ನು ತಿಳಿಸುವಂತಹ ಮಹತ್ತರ ಕೆಲಸ ವಕೀಲರ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಪಿ. ಕುಮಾರಸ್ವಾಮಿ, ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಪ್ರವೀಣ್ ನಾಯಕ್, ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಚಂದ್ರಶೇಖರ್ ಬಣಕಾರ್ ಉಪಸ್ಥಿತರಿದ್ದರು.
ನ್ಯಾಯವಾದಿ ಉಮೇಶ್ ಶೆಟ್ಟಿ ಶಾನ್ಕಟ್ಟು ಸ್ವಾಗತಿಸಿದರು. ನ್ಯಾಯವಾದಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕುಂದಾಪುರ ವಕೀಲರ ಸಂಘ (ರಿ.) ಕುಂದಾಪುರ ಇದರ ಪ್ರಧಾನ ಕಾರ್ಯದರ್ಶಿ ಹೆಚ್. ರವೀಶ್ಚಂದ್ರ ಶೆಟ್ಟಿ ವಂದಿಸಿದರು.